BIG NEWS: ದೇಶದ್ರೋಹಿ PFI ಸಂಘಟನೆ ಬ್ಯಾನ್, ಕೇಂದ್ರ ಸರ್ಕಾರ ಖಡಕ್ ನಿರ್ಧಾರ

Social Share

ನವದೆಹಲಿ,ಸೆ.28- ದೇಶದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದ ಆರೋಪದ ಹಿನ್ನಲೆಯಲ್ಲಿ ಪಾಪುಲರ್‍ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಮತ್ತು ಅದರ ಎಂಟು ಆಂಗ ಸಂಘಟನೆಗಳನ್ನು 5 ವರ್ಷಗಳ ಕಾಲ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಮತ್ತು ಅದರ ಅಂಗಸಂಸ್ಥೆಗಳು ದೇಶದಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವು, ನಿರ್ದೀಷ್ಟ ಸಮುದಾಯದ ವ್ಯಕ್ತಿಗಳನ್ನು ಗುರಿ ಮಾಡಿ ಭೀಕರವಾಗಿ ಹತ್ಯೆ ಮಾಡುವುದು, ದೇಶದ ಸಾಂವಿಧಾನಿಕ ವ್ಯವಸ್ಥೆಯನ್ನು ಕಡೆಗಣಿಸುವುದು, ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಕದಡುವುದು ಸೇರಿದಂತೆ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ದೇಶದ ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ವಿರುದ್ಧವಾಗಿ ಪೂರ್ವಾಗ್ರಹ ಪೀಡಿತವಾಗಿ ವರ್ತಿಸಿವೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ದೇಶ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸುವುದು ಅಗತ್ಯವೆಂದು ಕಂಡು ಬಂದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಪಿಎಫ್‍ಐ ಮತ್ತು ಅಂಗ ಸಂಸ್ಥೆಗಳಾದ ರೆಹಬ್ ಇಂಡಿಯಾ ಫೌಂಡೇಶನ್ (ಆರ್‍ಐಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ), ನ್ಯಾಷನಲ್ ಕಾನೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (ಎನ್‍ಸಿಎಚ್‍ಆರ್‍ಒ), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಸೇರಿ ಸಂಘಟನೆಗಳನ್ನು ನಿಷೇಧ ಮಾಡಲಾಗಿದೆ.

ಇವುಗಳಲ್ಲಿ ಬಹುತೇಕ ಸಂಘಟನೆಗಳು ಕೇರಳ ರಾಜ್ಯದ ಮೂಲ ಹೊಂದಿವೆ. ಸಂಘಟನಾತ್ಮಕ ಚಟುವಟಿಕೆಗಳ ನಿಯಂತ್ರಣ ಕಾಯ್ದೆ 1967ರ ಅಡಿ ಕಾನೂನು ಬಾಹಿತ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಈ ಹಿಂದೆ 2001ರಲ್ಲಿ ಕೇಂದ್ರ ಸರ್ಕಾರದಿಂದ ನಿಷೇಧಕ್ಕೆ ಒಳಪಟ್ಟಿದ್ದ ಸಿಮಿ ಸಂಘಟನೆಯ ಮತ್ತೊಂದು ಮುಖವಾಡದಂತಿದ್ದ ಪಿಎಫ್‍ಐ ಹಾಗೂ ಅದರ ಅಂಗಸಂಸ್ಥೆಗಳ ಚುಟುವಟಿಕೆಗಳಿಗೆ 5 ವರ್ಷಗಳ ಕಾಲ ಕಡಿವಾಣ ಹಾಕಲಾಗಿದೆ.

ಪಿಎಫ್‍ಐ ನಿಷೇಧಕ್ಕೆ ಕೇಂದ್ರ ಸರ್ಕಾರ ತನ್ನ ಅಸೂಚನೆಯಲ್ಲಿ ನೀಡಿರುವ ವಿವರಣೆಯಲ್ಲಿ ಕರ್ನಾಟಕ ಸರ್ಕಾರದ ಶಿಫಾರಸು ಹಾಗೂ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ಪಿಎಫ್‍ಐ ಹಾಗೂ ಅದರ ಅಂಗ ಸಂಸ್ಥೆಗಳು ಮೇಲ್ನೋಟಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಚಟುವಟಿಕೆಯಲ್ಲಿ ಗುರುತಿಸಿಕೊಂಡಿವೆ. ಆದರೆ ಆಂತರಿಕವಾಗಿ ಮೂಲಭೂತವಾದಕ್ಕೆ ಕುಮ್ಮಕ್ಕು ನೀಡುತ್ತಿದ್ದವು. ಗುಪ್ತ ಕಾರ್ಯಸೂಚಿಯೊಂದಿಗೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದವು. ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ದುರ್ಬಲಗೊಳಿಸುವ ಹಾಗೂ ದೇಶದ ಸಾಂವಿಧಾನಿಕ ಅಧಿಕಾರ ಮತ್ತು ಸಾಂವಿಧಾನ ಸ್ಥಾಪನೆಗೆ ಅಗೌರವ ತೋರಿಸುವ ಅಜೆಂಡಾ ಹೊಂದಿದ್ದವು ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ಯುಎಪಿಎ ಕಾಯ್ದೆಯ ಸೆಕ್ಷನ್ 3 (3) ರಲ್ಲಿನ ಅಧಿಕಾರವನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ದೇಶದ ಹಲವಾರು ರಾಜ್ಯಗಳು ಪಿಎಫ್‍ಐ ಹಾಗೂ ಅದರ ಸಂಘಟನೆಗಳನ್ನು ನಿಷೇಧ ಮಾಡಬೇಕೆಂದು ಬೇಡಿಕೆ ಇಟ್ಟಿದ್ದವು.
ರಾಷ್ಟ್ರೀಯ ತನಿಖಾ ದಳ(ಎನ್‍ಐಎ), ಜಾರಿನಿರ್ದೇಶನಾಲಯ( ಇಡಿ) ಸೇರಿದಂತೆ ಮತ್ತಿತರ ಕೇಂದ್ರೀಯ ತನಿಖಾ ಸಂಸ್ಥೆಗಳು ಸೆ.22 ಮತ್ತು 27ರಂದು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದವು.

ಅದರಲ್ಲಿ ಭಯೋತ್ಪಾದನೆ ಹಾಗೂ ಕೊಲೆಯಂತಹ ಗಂಭೀರ ಅಪರಾಧಗಳ ಸಂಚಿನ ಮಾಹಿತಿ ಪತ್ತೆಯಾಗಿತ್ತು. ಆಘಾತಕಾರಿ ಮಾಹಿತಿ ಬಹಿರಂಗವಾದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳು ಮೊದಲ ಸುತ್ತಿನ ದಾಳಿಯಲ್ಲಿ 106 ಮಂದಿಯನ್ನು ಬಂಧಿಸಿದ್ದರೆ, ನಿನ್ನೆ ನಡೆದ ದಾಳಿಯಲ್ಲಿ 247 ಮಂದಿಯನ್ನು ಬಂಧಿಸಲಾಗಿದೆ.

ವಿದೇಶಗಳಿಂದ ಅಕ್ರಮ ದೇಣಿಗೆ, ಸಾರ್ವಜನಿಕರ ಶಾಂತಿಗೆ ಭಂಗ, ಕಾನೂನು ಬಾಹಿರ ಚಟುವಟಿಕೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಪಿಎಫ್‍ಐ ಕಚೇರಿಗಳು ಹಾಗೂ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು.

Articles You Might Like

Share This Article