ನವದೆಹಲಿ, ಫೆ.25- ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ, ಕ್ರೀಡೆ, ಮನರಂಜನೆ, ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ವಿಧಿಸಲಾಗಿರುವ ನಿರ್ಬಂಧಗಳನ್ನು ಸಡಿಲಿಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಮಾರ್ಚ್‍ವರೆಗೂ ಅನ್ವಯವಾಗುವಂತೆ ಕೋವಿಡ್ ಮಾರ್ಗಸೂಚಿಗಳನ್ನು ವಿಧಿಸಲಾಗಿತ್ತು. ಆದರೆ ಪ್ರಸ್ತುತ ಕೋವಿಡ್ ಸಂಖ್ಯೆಗಳು ಕ್ಷೀಣಿಸಿವೆ. ಹಾಗಾಗಿ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ, ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆಯಂತೆ ಆರ್ಥಿಕ ಚಟುವಟಿಕೆಗಳನ್ನು ಮುಕ್ತವಾಗಿಸುವ ಸಲಹೆ ನೀಡಿದ್ದರು.
ಸ್ಥಳೀಯ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದ ನಂತರ, ಸಾಮಾಜಿಕ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಹಬ್ಬಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ಅನುಮತಿ ನೀಡಬಹುದು. ರಾತ್ರಿ ಕಫ್ರ್ಯೂ, ಸಾರ್ವಜನಿಕ ಸಾರಿಗೆಯ ಕಾರ್ಯಾಚರಣೆಗಳು, ಶಾಪಿಂಗ್ ಸಂಕೀರ್ಣಗಳು, ಸಿನಿಮಾ ಹಾಲ್‍ಗಳು, ಜಿಮ್‍ಗಳು, ಸ್ಪಾಗಳು, ರೆಸ್ಟೋರೆಂಟ್‍ಗಳು ಮತ್ತು ಬಾರ್‍ಗಳು, ಶಾಲಾ-ಕಾಲೇಜುಗಳು, ಕಚೇರಿಗಳು ಮತ್ತು ಇತರ ವಾಣಿಜ್ಯ ಚಟುವಟಿಕೆಗಳನ್ನು ಮುಕ್ತವಾಗಿಸುವಂತೆ ಸೂಚಿಸಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಲಾದ ಮಾರ್ಗಸೂಚಿಗಳಲ್ಲಿ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಕೈ ನೈರ್ಮಲ್ಯ ಮತ್ತು ಒಳಾಂಗಣದಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡುವಂತೆ ಸಲಹೆ ನೀಡಲಾಗಿದೆ.
ಕೋವಿಡ್ ನಿರ್ವಹಣೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರೀಕ್ಷೆ ಮತ್ತು ಕಣ್ಗಾವಲು, ಕ್ಲಿನಿಕಲ್ ನಿರ್ವಹಣೆ, ಲಸಿಕೆ ಮತ್ತು ಪ್ರಮಾಣಿತ ನಡವಳಿಕೆಯನ್ನು ಮುಂದುವರೆಸುವಂತೆ ಸಲಹೆ ನೀಡಿದ್ದಾರೆ. 2022ರ ಫೆಬ್ರವರಿ 18ರಂದು ಹೊರಡಿಸಲಾಗಿದ್ದ ಮಾರ್ಗಸೂಚಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಲಹೆಗೆ ಅನುಗುಣವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು ಎಂದು ಭಲ್ಲಾ ಹೇಳಿದ್ದಾರೆ.
ದೇಶದಲ್ಲಿ ದಿನದ ಸೋಂಕಿನ ಪ್ರಮಾಣ 13,166ರಷ್ಟಿದೆ. ಒಟ್ಟು ಪ್ರಕರಣಗಳ ಸಂಖ್ಯೆ 4,28,94,345 ರಷ್ಟಾಗಿದೆ, ಸಕ್ರಿಯ ಪ್ರಕರಣಗಳು 1,34,235ಕ್ಕೆ ಇಳಿದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಸಚಿವಾಲಯದ ಪ್ರಕಾರ ದೈನಂದಿನ ಧನಾತ್ಮಕ ದರವು 1.28 ಶೇಕಡಾ ಮತ್ತು ವಾರದ ಧನಾತ್ಮಕ ದರವು 1.48 ಶೇಕಡಾ ಎಂದು ದಾಖಲಾಗಿದೆ.
