CET ಗೊಂದಲ : ಸಚಿವರ ಕಾರ್ಯವೈಖರಿ ಪ್ರಶ್ನಿಸಿದ ಕಾಂಗ್ರೆಸ್

Social Share

ಬೆಂಗಳೂರು, ಅ.20- ಸಿಇಟಿ ಪರೀಕ್ಷೆ ನಡೆದು ಫಲಿತಾಂಶ ಪ್ರಕಟವಾಗಿ ನಾಲ್ಕೈದು ತಿಂಗಳು ಕಳೆದರು ಈವರೆಗೂ ಕೌನ್ಸಿಲಿಂಗ್ ನಡೆದು ಸೀಟು ಹಂಚಿಕೆಯಾಗದಿರುವ ಕುರಿತು ಕಾಂಗ್ರೆಸ್ ಲೇವಡಿ ಮಾಡಿದ್ದು, ಇದೇನಾ ಡಿಜಿಟಲ್ ಇಂಡಿಯಾ ಎಂದು ಪ್ರಶ್ನಿಸಿದೆ.

ನೀಟ್-ಸಿಇಟಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಸರ್ಕಾರಿ ಸೀಟು ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಹಲವಾರು ತಿಂಗಳಿನಿಂದ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಆದರೆ ಹಲವಾರು ಸರ್ಕಾರಿ ಸೇವೆಗಳ ವೆಬ್ ಸೈಟ್‍ಗಳಲ್ಲಿ ಸಮಸ್ಯೆ ಎದುರಾಗಿದೆ. ಎಲ್ಲದಕ್ಕೂ ತಾಂತ್ರಿಕ ಸಮಸ್ಯೆ ಎಂದು ಸರ್ಕಾರ ಸಬೂಬು ಹೇಳುತ್ತಿದೆ.

ನಕಲಿ ಶಿಕ್ಷಕರ ನೇಮಕಾತಿ CID ಪೊಲೀಸರ ದಾಳಿ: ಕೆಲವರು ವಶಕ್ಕೆ

ಸಮಸ್ಯೆ ಇರುವುದು ತಾಂತ್ರಿಕತೆಯಲ್ಲೋ ಅಥವಾ ಸರ್ಕಾರದಲ್ಲೋ? ಇದೇನಾ ಡಿಜಿಟಲ್ ಇಂಡಿಯಾ? ಎಂದು ಕಾಂಗ್ರೆಸ್ ಕಿಡಿಕಾರಿದೆ. ಸಿಇಟಿ, ನೀಟ್ ಸಮಸ್ಯೆಗಳು ಮತ್ತು ಗೊಂದಲಗಳನ್ನು ಬಗೆಹರಿಲಾಗದಷ್ಟು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥನಾರಾಯಣ ಬ್ಯುಸಿಯಾಗಿದ್ದಾರೆಯೇ ಎಂದು ಪ್ರಶ್ನಿಸಲಾಗಿದೆ.

ಇಂಜಿನಿಯರಿಂಗ್ ಸೇರಿದಂತೆ ವೃತ್ತಿ ಶಿಕ್ಷಣ ಕೋರ್ಸ್‍ಗಳ ಪ್ರವೇಶಕ್ಕೆ ಕಳೆದ ಜೂನ್‍ನಲ್ಲಿ ಸಿಇಟಿ ಪರೀಕ್ಷೆ ನಡೆದಿತ್ತು, ಜುಲೈನಲ್ಲಿ ಫಲಿತಾಂಶ ಪ್ರಕಟಗೊಂಡಿದೆ. ಹಿಂದಿನ ವರ್ಷದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಸಂಬಂಧ ಸೃಷ್ಟಿಯಾದ ಗೊಂದಲದಿಂದ ಪ್ರಕರಣ ನ್ಯಾಯಾಲಯದಲ್ಲಿ ಕೆಲ ದಿನಗಳ ಕಾಲ ವಿಚಾರಣೆ ನಡೆದು ಅಂತಿಮವಾಗಿ ಎರಡು ತಿಂಗಳ ಹಿಂದೆ ತೀರ್ಪು ಪ್ರಕಟವಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈವರೆಗೂ ದಾಖಲೆಗಳನ್ನು ಸ್ವೀಕರಿಸುವ ಪ್ರಕ್ರಿಯೆಯನ್ನೇ ಪೂರ್ಣಗೊಳಿಸಿಲ್ಲ. ಬಹುತೇಕ ಕಾಲೇಜುಗಳು ಮ್ಯಾನೇಜ್‍ಮೆಂಟ್ ಕೋಟಾದಡಿ ಕೆಲ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿಯಾಗಿದೆ. ಸರ್ಕಾರಿ ಸೀಟುಗಳಿಗೆ ಕಾದು ಕುಳಿತಿರುವ ವಿದ್ಯಾರ್ಥಿಗಳಲ್ಲಿ ಗೊಂದಲ ಮುಂದುವರೆದಿದೆ.

ಈಗಾಗಲೇ ಶೈಕ್ಷಣಿಕ ವರ್ಷ ಮುಗಿದು ಮಧ್ಯಂತರದಲ್ಲಿದ್ದೇವೆ. ಈ ವೇಳೆಗೆ ಬಹುತೇಕ ಮೊದಲ ಸೆಮಿಸ್ಟರ್ ಪರೀಕ್ಷೆಗಳು ಶುರುವಾಗಬೇಕಿತ್ತು. ಆದರೆ ಈವರೆಗೂ ಪ್ರವೇಶವೇ ಸಾಧ್ಯವಾಗಿಲ್ಲ ಎಂದು ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು ಸಚಿವರ ಕಾರ್ಯವೈಖರಿಯನ್ನು ಪ್ರಶ್ನಿಸಿದೆ.

ಪ.ಜಾ ಹಾಗೂ ಪ.ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿ ಸುಗ್ರೀವಾಜ್ಞೆ ಜಾರಿ

ಸರಣಿ ಟ್ವೀಟ್‍ಗಳ ಮೂಲಕ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಬೆಳಗಾವಿ ರಸ್ತೆಗಳ ಅವ್ಯಸ್ಥೆಗಳ ಬಗ್ಗೆ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಟೀಕಿಸಿರುವುದನ್ನು ಟ್ವೀಟ್‍ನಲ್ಲಿ ಉಲ್ಲೇಖಿಸಲಾಗಿದೆ. ಹೈಕೋರ್ಟ್ ಆಯ್ತು, ಜನತೆ ಆಯ್ತು, ಈಗ ಗೋವಾ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳೇ ಕರ್ನಾಟಕದ ರಸ್ತೆಗಳನ್ನು ಟೀಕಿಸುತ್ತಿದ್ದಾರೆ. ಪೇ ಸಿಎಂ ಅವರೇ ಗೋವಾ ಸಿಎಂಗೆ ಪ್ರತಿಕ್ರಿಯೆ ನೀಡಿ ಸೇ ಸಿಎಂ ಆಗುವುದು ಯಾವಾಗ ? ಇದು ಅತ್ಯಂತ ನಾಚಿಕೆಗೇಡು ಅಲ್ಲವೇ? ಎಂದು ತಿರುಗೇಟು ನೀಡಿದೆ. ಗೋವಾ ಸಿಎಂ ಟೀಕೆಯನ್ನು 40 ಪರ್ಸೆಂಟ್ ಸರ್ಕಾಕ್ಕೆ ಬಿಜೆಪಿಗರೇ ನೀಡಿದ ಸರ್ಟಿಫಿಕೇಟ್ ಎಂದು ಕಾಂಗ್ರೆಸ್ ಅಭಿಪ್ರಾಯ ಪಟ್ಟಿದೆ.

ಅಸ್ಸಾಂನಿಂದ ಬೆಂಗಳೂರಿಗೆ ಗಾಂಜಾ, ಮೂವರು ಸೆರೆ

ಮುಂದುವರೆದ ಟ್ವೀಟ್‍ನಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರದ ಕುರಿತು ಪ್ರಶ್ನೆ ಕೇಳುವುದನ್ನು ಮುಂದುವರೆಸಲಾಗಿದೆ. ರೈತರಿಗೆ ಮಾಹಿತಿ ನೀಡಲು ರೈತ ಬಂಧು ಟಿವಿ ಚಾನಲ್ ಪ್ರಾರಂಭಿಸುತ್ತೇವೆ ಎಂದು ಬಿಜೆಪಿ ಭರವಸೆ ನೀಡಿತ್ತು. ಆ ಟಿವಿ ಚಾನೆಲ್ ಎಲ್ಲಿ ಎಂದು ಕೇಳಿದೆ. ನಿಮ್ಮ ಭ್ರಷ್ಟಾಚಾರದ ಕತೆಗಳು ಆ ಚಾನೆಲ್‍ನಲ್ಲೂ ಪ್ರಸಾರವಾದರೆ ಕಷ್ಟ ಎಂದು ಭಯಪಟ್ಟಿರಾ ? ರೈತರಿಗೆ ಕನಿಷ್ಠ ಸಮರ್ಪಕವಾಗಿ ಗೊಬ್ಬರವನ್ನೇ ಕೊಡಲಾಗದವರು ಟಿವಿ ಚಾನಲ್ ಕೊಡುವರೇ ಎಂದು ಲೇವಡಿ ಮಾಡಲಾಗಿದೆ.

Articles You Might Like

Share This Article