ಸಿಇಟಿ ರ‍್ಯಾಂಕಿಂಗ್ ಹೈಕೋರ್ಟ್ ಆದೇಶ ಕುರಿತಾಗಿ ನಾಳೆ ಉನ್ನತ ಶಿಕ್ಷಣ ಇಲಾಖೆ ಸಭೆ

Social Share

ಬೆಂಗಳೂರು,ಸೆ.4- 2020-21ನೇ ಸಾಲಿನ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಿ ಹೊಸ ಸಿಇಟಿ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸುವಂತೆ ಹೈಕೋರ್ಟ್ ನೀಡಿರುವ ಆದೇಶದ ಕುರಿತಾಗಿ ಮುಂದೆ ತೆಗೆದುಕೊಳ್ಳಬೇಕಾದ ಪ್ರಕ್ರಿಯೆಗಳ ಕುರಿತು ನಾಳೆ ಉನ್ನತ ಶಿಕ್ಷಣ ಇಲಾಖೆ ಮಹತ್ವದ ಸಭೆ ನಡೆಸಲಿದೆ.

ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ಆದೇಶವನ್ನು ಯಥಾವತ್ತಾಗಿ ಪಾಲನೆ ಮಾಡಬೇಕೆ ಇಲ್ಲವೆ ದಿಸದಸ್ಯ ಪೀಠಕ್ಕೆ ಮೆಲ್ಮನವಿ ಅರ್ಜಿ ಹಾಕಬೇಕೆ ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ಅಡ್ವೋಕೇಟ್ ಜನರಲ್ ಮತ್ತು ಕಾನೂನು ತಜ್ಞರು, ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಶನಿವಾರ ಹೈಕೋರ್ಟ್‍ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠವು 2020-21ನೇ ಸಾಲಿನ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಿ ಹೊಸ ಸಿಇಟಿ ರ್ಯಾಂಕ್ ಪ್ರಕಟಿಸುವಂತೆ ಆದೇಶ ನೀಡಿತ್ತು.
ಇದೀಗ ಅಡಕತ್ತರಿಯಲ್ಲಿ ಸಿಲುಕಿರುವ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಅಡ್ವೋಕೇಟ್ ಜನರಲ್ ಮತ್ತು ಕಾನೂನು ತಜ್ಞರಿಂದ ಸಲಹೆ ಪಡೆಯಲು ಈ ಸಭೆಯನ್ನು ಕರೆಯಲಾಗಿದೆ.

ಹೈಕೋರ್ಟ್ ಆದೇಶದಂತೆ ಹೊಸ ಸಿಇಟಿ ರ್ಯಾಂಕ್ ಘೋಷಣೆ ಮಾಡಬೇಕೆ ಅಥವಾ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಬೇಕೆ ಎಂಬುದರ ಬಗ್ಗೆ ಸಾಧಕಬಾಧಕಗಳ ಕುರಿತಾಗಿ ಅಶ್ವಥ್ ನಾರಾಯಣ ಅಭಿಪ್ರಾಯವನ್ನು ಪಡೆಯಲಿದ್ದಾರೆ.
ಶನಿವಾರ ಹೈಕೋರ್ಟ್ ನೀಡಿರುವ ತೀರ್ಪಿನಿಂದಾಗಿ 2020-21ನೇ ಸಾಲಿನ, ಮರುಪರೀಕ್ಷೆ ಬರೆದ ಸುಮಾರು 21 ಸಾವಿರ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಈಗ ನ್ಯಾಯಾಲಯ ನೀಡಿರುವ ಆದೇಶದಿಂದ ರ್ಯಾಂಕಿಂಗ್‍ನಲ್ಲಿ ಭಾರೀ ಏರುಪೇರಾಗುವ ಸಾಧ್ಯತೆ ಇದೆ.

2021ರಲ್ಲಿ ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳನ್ನು 2022-23ರ ಸಾಲಿನ ಇನ್ನಿತರ ಪದವಿಗಳ ಪ್ರವೇಶಕ್ಕೆ ಪರಿಗಣಿಸಲಾಗಿದೆ. ಆದರೆ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕೋರ್ಸ್‍ಗಳಿಗೆ ಪರಿಗಣಿಸುವುದಿಲ್ಲ ಎಂಬ ಕೆಇಎಯ ಟಿಪ್ಪಣಿ ವಿವೇಚನಾ ರಹಿತ, ಅತಾರ್ಕಿಕ ಮತ್ತು ನ್ಯಾಯಸಮ್ಮತವಾಗಿಲ್ಲ ಎಂದು ಹೈಕೋರ್ಟ್ ಹೇಳಿತ್ತು.

ಅರ್ಜಿದಾರರಾದ ಸಿಇಟಿ ಪುನರಾವರ್ತಿತರು ಪಡೆದ ದ್ವಿತೀಯ ಪಿಯು ಅಂಕಗಳನ್ನು 2022-23ರ ಸಿಇಟಿ ರ್ಯಾಂಕಿಂಗ್‍ಗೆ ಪರಿಗಣಿಸಲಾಗದು ಎಂಬ ಕರ್ನಾಟಕ ಪರೀಕ್ಷಾ ಪ್ರಾಕಾರದ (ಕೆಇಎ) ಟಿಪ್ಪಣಿಯನ್ನು ರದ್ದುಗೊಳಿಸಿತ್ತು.

ಮರುಪರೀಕ್ಷೆ ಬರೆದ ಅಭ್ಯರ್ಥಿಗಳ ಪ್ರಸಕ್ತ ಸಾಲಿನ ಸಿಇಟಿ ಅಂಕಗಳ ಜೊತೆ ಕಳೆದ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಹೊಸ ಸಿಇಟಿ ರ್ಯಾಂಕಿಂಗ್ ಪಟ್ಟಿ ಪ್ರಕಟಿಸುವಂತೆ ಆದೇಶ ಕೊಟ್ಟಿತ್ತು. ಕೋವಿಡ್ ಕಾರಣದಿಂದ 2021ರಲ್ಲಿ ದ್ವಿತೀಯ ಪಿಯು ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಿರಲಿಲ್ಲ,

ಅಂಥವರಿಗೆ ಆಂತರಿಕ ಮೌಲ್ಯಮಾಪನದ ಮೂಲಕ ಬಡ್ತಿ ನೀಡಲಾಗಿತ್ತು. ಸಿಇಟಿ 2021-22ರಲ್ಲಿ ಪಡೆದ ಅಂಕಗಳನ್ನು ಮಾತ್ರ ಪರಿಗಣಿಸಿ ಮೆರಿಟ್ ನಿರ್ಧರಿಸಬೇಕು ಎಂದು ಸೂಚಿಸಿ, ನಿಯಮ 4ಕ್ಕೆ ತಿದ್ದುಪಡಿ ಮಾಡಿ ನಿಯಮಾವಳಿಯನ್ನು ಸೇರಿಸುವ ಮೂಲಕ ಸರ್ಕಾರವು ಸೆಪ್ಟೆಂಬರ್ 1, 2021 ರಂದು ಅಸೂಚನೆಯನ್ನು ಹೊರಡಿಸಿದೆ.

2022ರ ಸಿಇಟಿ ಪರೀಕ್ಷೆಯಲ್ಲಿ 2,10,829 ವಿದ್ಯಾರ್ಥಿಗಳುಹಾಜರಾಗಿದ್ದಾರೆ. ಈ ಪೈಕಿ 1,69,328 ಮಂದಿ ಸೀಟು ಹಂಚಿಕೆಗೆ ಅರ್ಹರಾಗಿದ್ದಾರೆ. ಹಾಜರಾದ ಅಭ್ಯರ್ಥಿಗಳಲ್ಲಿ 23,344 ಮಂದಿ 2020-21ನೇ ಬ್ಯಾಚ್‍ಗೆ ಸೇರಿದವರು. ಕೆಇಎ ಜುಲೈ 30, 2022 ರಂದು ಸಿಇಟಿ ಫಲಿತಾಂಶಗಳು ಮತ್ತು ವಿದ್ಯಾರ್ಥಿಗಳ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿತು ಮತ್ತು ಅದೇ ದಿನ ಟಿಪ್ಪಣಿಯನ್ನು ಸಹ ಬಿಡುಗಡೆ ಮಾಡಿತ್ತು.

ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನಿಂದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದಿದ್ದ (ಕೆಸಿಇಟಿ) ಫ್ರೆಶರ್ ವಿದ್ಯಾರ್ಥಿಗಳು ಅತೃಪ್ತರಾಗಿದ್ದಾರೆ. ಹೊಸ ರ್ಯಾಂಕಿಂಗ್ ಪಟ್ಟಿ ಪ್ರಕಟಿಸಲು ಯೋಜಿಸಲಾಗುತ್ತಿದೆ ಮತ್ತು ನ್ಯಾಯಾಲಯದ ಆದೇಶದ ನಂತರ ಶೀಘ್ರದಲ್ಲೇ ಕೌನ್ಸೆಲಿಂಗ್ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

Articles You Might Like

Share This Article