ಬೆಂಗಳೂರು, ಫೆ.23- ಶತಾಯ-ಗತಾಯ ಕರ್ನಾಟಕದಲ್ಲಿ ಮತ್ತೆ ಅಧಿಕಾರವನ್ನು ಉಳಿಸಿಕೊಳ್ಳಲೇ ಬೇಕೆಂದು ದೃಢ ಸಂಕಲ್ಪ ಮಾಡಿರುವ ಬಿಜೆಪಿ, ಚುನಾವಣಾ ಚಾಣಕ್ಯ ಅಮಿತ್ ಶಾ ಹಾಗೂ ರಾಜ್ಯ ಉಸ್ತುವಾರಿ ಧಮೇಂದ್ರ ಪ್ರಧಾನ್ ಸೇರಿದಂತೆ ಘಟಾನುಘಟಿ ನಾಯಕರು ರಾಜ್ಯಕ್ಕೆ ಏಕಕಾಲಕ್ಕೆ ದಾಂಗುಡಿ ಇಡುವ ಮೂಲಕ ಚುನಾವಣೆಗೆ ಕಹಳೆ ಮೊಳಗಿಸಿದ್ದಾರೆ.
ಅತ್ತ ಗಣಿ ಜಿಲ್ಲೆ ಬಳ್ಳಾರಿಯ ಸಂಡೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಭರ್ಜರಿ ಕಾರ್ಯಕರ್ತರ ಸಮಾವೇಶ ನಡೆಸಿದರೆ, ಇತ್ತ ಚುನಾವಣಾ ಉಸ್ತುವಾರಿ ನೇಮಕಗೊಂಡಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಸಹಾ ಉಸ್ತುವಾರಿ ಮನ್ಸುಕ್ ಮಾಂಡೋವಿಯಾ ಹಾಗೂ ಅಣ್ಣಾ ಮಲೈ ಅವರುಗಳು ರಾಜ್ಯಕ್ಕೆ ಆಗಮಿಸಿ ಬಿಜೆಪಿ ಪರ ಕಾರ್ಯತಂತ್ರ ರೂಪಿಸುವತ್ತ ಚಿತ್ತ ಹರಿಸಲಿದ್ದಾರೆ.
ಉಸ್ತುವಾರಿಯಾಗಿ ನೇಮಕವಾದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಈ ಮೂವರನ್ನು ವಿಮಾನ ನಿಲ್ದಾಣದಲ್ಲಿ ಭರ್ಜರಿಯಾಗಿ ಕಾರ್ಯಕರ್ತರು ಸ್ವಾಗತ ಕೋರಿದರು. ಇನ್ನು ಮುಂದೆ ಬಹುತೇಕ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಉಸ್ತುವಾರಿಗಳು ಕರ್ನಾಟಕದಲ್ಲೇ ಠಿಕಾಣಿ ಹೂಡಲಿದ್ದು, ಪಕ್ಷದ ಗೆಲುವಿಗೆ ಬೇಕಾದ ರಣತಂತ್ರ ಹೆಣೆಯಲಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಣಿಜಿಲ್ಲೆ ಬಳ್ಳಾರಿಯಲ್ಲಿ ನಿರಿಕ್ಷೀಗೆ ತಕ್ಕಂತೆ ಫಲಿತಾಂಶ ಬಂದಿರಲಿಲ್ಲ. ಈ ಬಾರಿ ಇದು ಪುನಾರವರ್ತನೆಯಾಗಬಾರದೆಂದು ಮನಗಂಡಿರುವ ಬಿಜೆಪಿ ವರಿಷ್ಠರು ಪಕ್ಷದ್ಲಲಿ ಉಂಟಾಗಿರುವ ಸಣ್ಣಪುಟ್ಟ ಲೋಪದೋಷಗಳು, ಮುಖಂಡರ ನಡುವಿನ ಅಸಮಾಧಾನವನ್ನು ಹೋಗಲಾಡಿಸಲು ಮುಂದಾಗಿದ್ದಾರೆ.
ಹೀಗಾಗಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಸಾರ್ವಜನಿಕ ಸಮಾವೇಶಕ್ಕಾಗಿ ಇಂದು ಸಂಡೂರಿಗೆ ಆಗಮಿಸಿದ್ದರು. ಜೊತೆಗೆ ಪಟ್ಟಣಕ್ಕೆ ರಾಜ್ಯ ಕಮಲ ಪಡೆಯ ನಾಯಕರು, ಕಾರ್ಯಕರ್ತರ ದಂಡು ಆಗಮಿಸಿತ್ತು.ಈ ಕಾರ್ಯಕ್ರಮದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯನ್ನು ಒಳಗೊಂಡಂತೆ ಕಲ್ಯಾಣ ಕರ್ನಾಟಕದ ಲಕ್ಷಾಂತರ ಜನ ಭಾಗವಹಿಸಿದ್ದರು.
ಇಲ್ಲಿನ ಹೊಸಪೇಟೆ ರಸ್ತೆಯ ಎಸ್‍ಆರ್‍ಎಸ್ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿ, ಬರಲಿರುವ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಅಖಂಡ ಬಳ್ಳಾರಿ ಜಿಲ್ಲೆ ಮಾತ್ರವಲ್ಲದೆ, ಕಲ್ಯಾಣ ಕರ್ನಾಟಕದ ಒಟ್ಟು 2 ಲಕ್ಷ ಜನರು ಭಾಗವಹಿಸಿದ್ದರು.
ಸಮಾವೇಶದಲ್ಲಿ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲï, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಶಾ ಅವರ ಆಗಮನ ಕಾರ್ಯಕರ್ತರಲ್ಲಿ ಸಾಕಷ್ಟುಹುಮ್ಮಸ್ಸು ತಂದಿತು.
ಇತಿಹಾಸದಲ್ಲಿ ಈವರೆಗೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿಲ್ಲ. ಈ ಬಾರಿ ಶತಾಯ ಗತಾಯ ಗೆಲುವು ಸಾಧಿಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಹೀಗಾಗಿ ಅಮಿತ್ ಶಾ ಅವರು ವಿಜಯಕಹಳೆಯನ್ನು ಇಲ್ಲಿಂದಲೇ ಆರಂಭಿಸುವ ಉದ್ದೇಶದಿಂದ ಸಂಡೂರಿಗೆ ಆಗಮಿಸಿದ್ದರು ಎನ್ನುವುದು ಪಕ್ಷದ ಮುಖಂಡರ ಅಭಿಪ್ರಾಯವಾಗಿದೆ. ಅಮಿತ್ ಶಾ ಮೊದಲು ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಕೋರ್ ಕಮಿಟಿಯ ಮುಖಂಡರ ಸಭೆಯನ್ನು ಶಿವಪುರ ಪ್ಯಾಲೇಸ್‍ನಲ್ಲಿ ನಡೆಸಿದರು.
ಬಳ್ಳಾರಿ ಜಿಲ್ಲೆಯ ಕಾರ್ಯಕರ್ತರ ಸಭೆಯ ನಂತರ ಅಮಿತ್ ಶಾ 4 ಗಂಟೆಗೆ ಬೆಂಗಳೂರಿಗೆ ತೆರಳಲಿದ್ದು, ವಿಧಾನಸಭಾ ಚುನಾವಣೆಯ ಸಿದ್ಧತೆಯ ಬಗ್ಗೆ ರಾಜ್ಯದ ಬಿಜೆಪಿ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಪಕ್ಷ ಸಂಘಟನೆ ಹಾಗೂ ಚುನಾವಣಾ ಗೆಲುವಿಗೆ ಬೇಕಾದ ತಂತ್ರಗಳ ಬಗ್ಗೆ ಬಿಜೆಪಿ ನಾಯಕರಿಗೆ ಸಲಹೆ ನೀಡಲಿದ್ದಾರೆ.
ಕುಂದಾನಗರಿಗೆ ಮೋದಿ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಿಸಿರುವ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ ನಂತರ ಗಡಿ ಜಿಲ್ಲೆ ಬೆಳಗಾವಿಗೆ ಆಗಮಿಸುವರು.
ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಫೆ.27ರಂದು ಬೆಳಗಾವಿಗೆ ಆಗಮಿಸಲಿರುವ ಪ್ರಧಾನಿ ಮೋದಿ ಅವರು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಸುಮಾರು 8 ರಿಂದ 10 ಕಿ.ಮೀ. ರೋಡ್ ಶೋಗಾಗಿ ಯೋಜನೆ ಹಾಕಿಕೊಂಡಿದ್ದು, ಎಸ್ಪಿಜಿಯವರ ಅನುಮತಿ ಅಷ್ಟೇ ಬಾಕಿ ಇದೆ.
ನರೇಂದ್ರ ಮೋದಿ ಅವರ ಅದ್ಧೂರಿ ರೋಡ್ ಶೋ ನಡೆಯಲಿದೆ. ಈ ಕಾರ್ಯಕ್ರಮ ಅವಿಸ್ಮರಣೀಯವಾಗಲಿದೆ. ಬೆಳಗಾವಿ ನಗರದಲ್ಲಿ ಪ್ರಧಾನಿ ಮೋದಿ ಅವರ ರೋಡ್ ಶೋ ನಡೆಯಲಿರುವುದರಿಂದ ಬಿಜೆಪಿ ಹಾಗೂ ಜನರಲ್ಲಿ ಉತ್ಸಾಹ ಮೂಡಿದೆ. ನಗರದಲ್ಲಿ ಆಯೋಜಿಸಿರುವ ವಿವಿಧ ಲೋಕಾರ್ಪಣೆ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳು ಹಾಗೂ ಮೋದಿಯವರ ಅಭಿಮಾನಿಗಳು ಭಾಗವಹಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮದ ಬಗ್ಗೆ ಕಾರ್ಯಕರ್ತರೂ ಆಸಕ್ತಿ ತೋರಿದ್ದಾರೆ. ರಾಜ್ಯ ಸರ್ಕಾರ ಹಾಗೂ ಪ್ರಧಾನಿ ಕಚೇರಿಯಿಂದ ರೋಡ್ ಶೋಗೆ ಅನುಮತಿ ಸಿಕ್ಕಿದೆ. ಸ್ಥಳೀಯ ಶಾಸಕರು ಹಾಗೂ ಪಕ್ಷದ ಮುಖಂಡರು ಸಿದ್ಧತೆ ನಡೆಸಿದ್ದಾರೆ.
ಇಡೀ ದೇಶದಲ್ಲಿ ಎಲ್ಲೂ ಆಗದ ಐತಿಹಾಸಿಕ ರೋಡ್ ಶೋ ನಡೆಸಲು ನಾವು ನಿರ್ಧರಿಸಲಾಗಿದೆ. ಇಡೀ ದೇಶದ ಸಂಸ್ಕøತಿ ಬಿಂಬಿಸುವ ಯತ್ನವನ್ನು ನಡೆಸಲಾಗುವುದು. ನಾವು 8 ರಿಂದ 10 ಕಿ.ಮೀ. ರೋಡ್ ಶೋಗೆ ಅನುಮತಿ ಕೇಳಿದ್ದೇವೆ. ಎಸ್‍ಪಿಜಿಯವರು ಎಷು ್ಟಕಿ.ಮೀ. ರೋಡ್ ಶೋಗೆ ಒಪ್ಪಿಗೆ ನೀಡುತ್ತಾರೆ ನೋಡಬೇಕು. ಮೋದಿಯವರು ಅಂದು ಕಿಸಾನ್ ಸಮ್ಮಾನ್ ಯೋಜನೆ, ಜಲಜೀವನ್ ಮಿಷನ್, ಆಸ್ಪತ್ರೆಗಳು, ರೈಲ್ವೆ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಬೆಳಗಾವಿ ಚನ್ನಮ್ಮ ವೃತ್ತದಿಂದ ಮಾಲಿನಿ ಸಿಟಿವರೆಗೆ ರೋಡ್ ಶೋಗೆ ಚಿಂತನೆ ಮಾಡಲಾಗಿದೆ. ಈ ವೇಳೆ ಹತ್ತು ಸಾವಿರ ಮಹಿಳೆಯರು ಭಗವಾ ಪೇಟ ಧರಿಸಿ ಪೂರ್ಣಕುಂಭ ಹೊತ್ತು ಪ್ರಧಾನಿ ಮೋದಿ ಸ್ವಾಗತಿಸಲಿದ್ದಾರೆ. ಮೋದಿಯವರು ಪ್ರಧಾನಿ ಆಗುವ ಮೊದಲು ಇದ್ದ ಭಾರತ ಬಳಿಕ ಆದ ಭಾರತದ ಕಲ್ಪನೆ ಕಟ್ಟಿಕೊಡಲಾಗುವುದು. ರೋಡ್ ಶೋ ನಡೆಯುವ ರಸ್ತೆಯ ಅಕ್ಕಪಕ್ಕದಲ್ಲಿ ನೇರ ಕಾರ್ಯಕ್ರಮಕ್ಕೆ ಚಿಂತನೆ ನಡೆಸಲಾಗಿದೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಿಂದ 4 ರಿಂದ 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ.