ದಕ್ಷ, ಖಡಕ್ ಅಧಿಕಾರಿ ಪ್ರತಾಪ್ ರೆಡ್ಡಿ ಟ್ರ್ಯಾಕ್ ರೆಕಾರ್ಡ್ ಗೊತ್ತೇ..?
ಬೆಂಗಳೂರು,ಮೇ17- ದಕ್ಷ ಹಾಗೂ ಖಡಕ್ ಪೊಲೀಸ್ ಅಧಿಕಾರಿ ಎಂದೇ ಹೆಸರಾಗಿರುವ ಪ್ರತಾಪ್ ರೆಡ್ಡಿ ಅವರು ನಗರ ಪೊಲೀಸ್ ಆಯುಕ್ತರಾಗಿ ಇಂದು ಅಧಿಕಾರ ಸ್ವೀಕರಿಸಿದರು. ಆಂಧ್ರಪ್ರದೇಶದ ಗುಂಟೂರು ಮೂಲದವರಾದ ಪ್ರತಾಪ್ ರೆಡ್ಡಿ ಅವರು ಜುಲೈ 1, 1964ರಂದು ಜನಿಸಿದರು.
ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಿಂದ ಎಂಬಿಎಗೆ ಸಮಾನಂತರವಾದ ಸಾರ್ವಜನಿಕ ನೀತಿ ಮತ್ತು ನಿರ್ವಹಣೆ ವಿಭಾಗದಲ್ಲಿ ಡಿಫ್ಲೋಮೊ ಪಡೆದರು. 1991ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾದ ಪ್ರತಾಪ್ ರೆಡ್ಡಿ ಅವರು ಮೊದಲು ಹಾಸನದಲ್ಲಿ ಎಎಸ್ಪಿಯಾಗಿ ಕರ್ನಾಟಕ ಕೇಡರ್ ನಲ್ಲಿ ಸೇವೆ ಆರಂಭಿಸಿದರು.
1994ರಲ್ಲಿ ಮುಖ್ಯಮಂತ್ರಿಗಳ ಪದಕ ಪಡೆದಿರುವ ಪ್ರತಾಪ್ ರೆಡ್ಡಿ ಅವರು 2008ರಲ್ಲಿ ಸಾರ್ಥಕ ಸೇವೆಗಾಗಿ ಮತ್ತು 2015ರಲ್ಲಿ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪದಕ ಪಡೆದಿದ್ದಾರೆ. 1991ರಿಂದ 1995ರವರೆಗೆ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದು, ತದನಂತರ 1997ವರೆಗೆ ಕೆಎಸ್ಆರ್ಪಿ ಮೊದಲನೆ ಬೆಟಾಲಿಯನ್ನಲ್ಲಿ ಕಮಾಂಡೆಂಟ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ತದನಂತರ ಬಿಜಾಪುರ, ಕಲಬುರಗಿ ಎಸ್ಪಿಯಾಗಿ ಹಾಗೂ ಬೆಂಗಳೂರಿನ ಸಿಬಿಐ ಘಟಕಗಳಲ್ಲಿ, ಮುಂಬೈನಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿಯಾಗಿ ಸೇವೆ ಸಲ್ಲಿಸಿರುವ ಇವರು ಬೆಂಗಳೂರು ನಗರದ ಸಿಎಆರ್ನಲ್ಲಿ ಡಿಸಿಪಿಯಾಗಿ, ಸಿಒಡಿ ವಿಭಾಗದ ಡಿಐಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ.
ನಿಸ್ತಂತು ಸಂವಹನ ಮತ್ತು ಕಂಪ್ಯೂಟರ್ ವಿಭಾಗದಲ್ಲಿ ಡಿಐಜಿಪಿಯಾಗಿ ಹಾಗೂ ಸೈಬರ್ ಸೆಕ್ಯೂರಿಟಿ ವಿಭಾಗದಲ್ಲಿ, ಮಂಗಳೂರು ಐಜಿಪಿಯಾಗಿ, ಗೃಹ ಇಲಾಖೆ ಕಾರ್ಯದರ್ಶಿಯಾಗಿ, ಆಂತರಿಕ ಭದ್ರತಾ ವಿಭಾಗದ ಐಜಿಪಿ, ಸಿಐಡಿ ಐಜಿಪಿ, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ, ಸಿಐಡಿ ಎಡಿಜಿಪಿ, ಆಂತರಿಕಾ ಭದ್ರತಾ ವಿಭಾದಲ್ಲಿ ಎಡಿಜಿಪಿಯಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಗಿದ್ದರು. ಇದೀಗ ಇಂದು ಈ ಹುದ್ದೆಯಿಂದ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ.