ಬೆಂಗಳೂರು, ಸೆ .17- ಭಾರೀ ಕುತೂಹಲ ಕೆರಳಿಸಿರುವ ಉದ್ಯಮಿಗೆ ವಂಚನೆ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಾದರೂ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ.
ಮಹಿಳಾ ಸಾಂತ್ವಾನ ಕೇಂದ್ರದಲ್ಲಿದ್ದ ಆಕೆಯನ್ನು ಪೊಲೀಸರು ಸಿಸಿಬಿ ಕಚೇರಿಗೆ ವಿಚಾರಣೆಗಾಗಿ ಕರೆತಂದಾಗ ಕುಸಿದುಬಿದ್ದರು. ತಕ್ಷಣ ಪೊಲೀಸರು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದರು. ಕಳೆದ ಮೂರು ದಿನಗಳಿಂದ ಆಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸುಧಾರಿಸುತ್ತಿದೆ. ಈಗಾಗಲೇ ಹಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದ್ದು, ವರದಿಯನ್ವಯ ವೈದ್ಯರು ಆರೋಗ್ಯ ಪರಿಶೀಲನೆ ನಡೆಸಿದ್ದು, ಇಂದು ಸಾಮಾನ್ಯ ವಾರ್ಡ್‍ಗೆ ವರ್ಗಾಯಿಸುವ ಸಾಧ್ಯತೆ ಇದ್ದು, ನಾಳೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬಹುದು. ನಂತರ ಅವರನ್ನು ಸಿಸಿಬಿ ಪೊಲೀಸರು ಮತ್ತೆ ವಿಚಾರಣೆಗೆ ಒಳಪಡಿಸಲಿದ್ದಾರೆ. ಈಗಾಗಲೇ ಸಿಸಿಬಿ ಅಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿ ಆರೋಪಿಯ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡು ಬಂದಿದೆ.
ಸ್ವಾಮೀಜಿ ನಾಪತ್ತೆ: ಪ್ರಕರಣದ ಮೂರನೇ ಆರೋಪಿಯಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿ ಇನ್ನೂ ನಾಪತ್ತೆಯಾಗಿದ್ದು, ಅವರ ಹುಡುಕಾಟವನ್ನು ಸಿಸಿಬಿ ಪೊಲೀಸರು ಮುಂದುವರಿಸಿದ್ದಾರೆ. ಈಗಾಗಲೇ ಸ್ವಾಮೀಜಿ ಅವರ ಕಾರು ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದು, ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಕಾರನ್ನು ಕೂಡ ಜಪ್ತಿ ಮಾಡಲಾಗಿದೆ.
ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಈವರೆಗೆ ಸುಮಾರು 8 ಜನರನ್ನು ಬಂಧಿಸಿದ್ದಾರೆ. ಇನ್ನೂ ಕೆಲವರನ್ನು ವಿಚಾರಣೆ ನಡೆಸುತ್ತಿದ್ದು, ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಕೂಡ ಇದೆ.
ಈ ಪ್ರಕರಣದ ತನಿಖೆ ನಡೆಸಿರುವ ಸಿಸಿಬಿ ಪೊಲೀಸರು ವಿವಿಧ ಕಡೆ ದಾಳಿ ನಡೆಸಿ ನಗದು ಸೇರಿದಂತೆ ಒಂದೂವರೆ ಕೋಟಿ ರೂ. ಬೆಲೆಯ ಚಿನ್ನ, ಬಾಂಡ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
#ChaitraKundapur, #HealthRecovery, #cheating, #Case, #businessman,