ಕಲಬುರಗಿ, ಮಾ.1-ಶಿವಲಿಂಗ ಶುದ್ಧೀಕರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಆಗಮಿಸುತ್ತಿದ್ದ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ್ ಅವರನ್ನು ಶಹಬಾದ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚೈತ್ರಾ ಕುಂದಾಪುರ್ ಅವರು ಅಳಂದಾ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ವೇಳೆ ಯಾದಗಿರಿ ಮಾರ್ಗವಾಗಿ ಕಲಬುರಗಿಗೆ ಬರುವಾಗ ಪೊಲೀಸರು ವಶಕ್ಕೆ ಪಡೆದು ಯಾದಗಿರಿ ಜಿಲ್ಲೆ ಗಡಿ ದಾಟಿಸಿ ಬಿಟ್ಟು ಬಂದಿದ್ದಾರೆ.
ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಫೆ.27ರಿಂದ ಮಾ.3ರ ವರೆಗೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತು ಚೈತ್ರಾ ಕುಂದಾಪುರ್ ಹಾಗೂ ಜೇವರ್ಗಿ ತಾಲ್ಲೂಕಿನ ಆಂದೋಲದ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರಿಗೆ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಯಶ್ವಂತ್ ವಿ.ಗುರ್‍ಕರ್ ಅವರು ಆದೇಶಿಸಿದ್ದರು.
ನಿರ್ಬಂಧ ಉಲ್ಲಂಘಿಸಿ ಜಿಲ್ಲೆಗೆ ಆಗಮಿಸುತ್ತಿದ್ದ ಚೈತ್ರಾ ಕುಂದಾಪುರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಯಾದಗಿರಿ ಜಿಲ್ಲೆ ಗಡಿ ದಾಟಿಸಿ ಬಿಟ್ಟುಬಂದಿದ್ದಾರೆ.
