ಹುಬ್ಬಳ್ಳಿ,ಮಾ.6- ಉಕ್ರೇನ್‍ನಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರಕಾರ ಸಾಕಷ್ಟು ಶ್ರಮಿಸುತ್ತಿದೆ ಎಂದು ಖಾರ್ಕಿವ್‍ನಲ್ಲಿ ಎಂಬಿಬಿಎಸ್ ಓದುತ್ತಿರುವ ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದ ಚೈತ್ರಾ ಗಂಗಾಧರ ಸಂಶಿ ತಿಳಿಸಿದರು.
ಬೆಂಗಳೂರಿನಿಂದ ವಿಮಾನದಲ್ಲಿ ನಗರಕ್ಕೆ ಆಗಮಿಸಿದ ಅವರು, ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್‍ನಲ್ಲಿ ಊಟಕ್ಕೆ ಬಹಳ ಪರದಾಡಬೇಕಾಯಿತು. ದಿನಕ್ಕೊಂದು ಹೊತ್ತು ಊಟ ಸಿಕ್ಕರೆ ಅದೇ ಹೆಚ್ಚು. ಯುದ್ದ ಆರಂಭವಾದ ಮೂರ್ನಾಲ್ಕು ದಿನಗಳಲ್ಲಿ ನೀರು ಸಿಗುವುದು ಕೂಡ ಕಷ್ಟವಾಗಿತ್ತು ಎಂದರು.
ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಿಂದ ನಾವು ಕೆಲವರು ಹೊರಬರಲು ಯೋಚಿಸಿದ್ದೇವು. ಆದರೆ ನವೀನ್ ಮೃತಪಟ್ಟ ಸುದ್ದಿ ತಿಳಿದು ಯೋಜನೆ ಕೈ ಬಿಟ್ಟೆವು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತೀಯರನ್ನೇ ಹೆಚ್ಚು ರಕ್ಷಣೆ ಮಾಡಲಾಗುತ್ತಿದೆ. ಉಕ್ರೇನ್‍ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಯಾರೂ ಒತ್ತೆಯಾಳುಗಳಾಗಿ ಇಟ್ಟುಕೊಂಡಿರಲಿಲ್ಲ. ನಮಗಂತೂ ಆ ಅನುಭವ ಆಗಲಿಲ್ಲ ಎಂದು ಹೇಳಿದರು.
