ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗಿನ ಮೇಲ್ಸೇತುವೆ ನಿರ್ಮಾಣಕ್ಕೆ ಮರುಜೀವ

Social Share

ಬೆಂಗಳೂರು,ಅ.4- ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಮೇಲ್ಸೇತುವೆ ನಿರ್ಮಿಸುವ ಯೋಜನೆಗೆ ಮತ್ತೆ ಮರುಜೀವ ಬಂದಿದೆ.
ಏರ್‍ಪೆರ್ಟ್ ರಸ್ತೆಯ ವಾಹನ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕಳೆದ ಆರು ವರ್ಷಗಳ ಹಿಂದೆ ಬಿಡಿಎ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಫ್ಲೈ ಓವರ್ ನಿರ್ಮಿಸಲು ಮುಂದಾಗಿತ್ತು.

ಆದರೆ, ಈ ಯೋಜನೆ ಜಾರಿಗೆ ಕಿಕ್ ಬ್ಯಾಕ್ ಪಡೆಯಲಾಗಿದೆ ಹಾಗೂ ಯೋಜನೆ ಜಾರಿಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಮೇಲ್ಸೇತುವೆ ನಿರ್ಮಾಣ ಮಾಡಲು ಬಿಬಿಎಂಪಿ ಬ್ಲೂ ಪ್ರಿಂಟ್ ರೆಡಿ ಮಾಡಿಕೊಂಡು ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಡಿಪಿಆರ್‍ಗೆ ಪ್ರಸ್ತಾವನೆ ಸಲ್ಲಿಸಿದೆ.

ಆರು ವರ್ಷಗಳ ಹಿಂದೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಯೋಜನೆ ಬಗ್ಗೆ ಪ್ರಸ್ತಾಪಿಸಿತ್ತು. ಇದಕ್ಕೆ ಬಿಜೆಪಿ ಶಾಸಕರೇ ಅಡ್ಡಗಾಲಾಗಿದ್ದರು. ಯೋಜನೆ ಜಾರಿಗಾಗಿ ಕಾಂಗ್ರೆಸ್ಸಿಗರ ಕಿಕ್‍ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿ ಭಾರಿ ಹೋರಾಟಕ್ಕೆ ಮುಂದಾಗಿದ್ದರಿಂದ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು.

ಈಗ ಅದೆ ಬಿಜೆಪಿ ಶಾಸಕರೇ ಪ್ಲೈಓವರ್ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿರುವುದರಿಂದ ಯೋಜನೆ ಮರು ಜಾರಿಗೆ ಬಿಜೆಪಿ ಸರ್ಕಾರ ಸಿದ್ದತೆ ನಡೆಸಿದೆ ಎಂದು ತಿಳಿದುಬಂದಿದೆ. ಸುಮಾರು 6 ರಿಂದ 7 ಕಿ,ಮೀ ಉದ್ದದ ಮೇಲ್ಸೇತುವೆಯನ್ನು ಕಾಂಕ್ರೀಟ್ ನಿಂದ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ.

ಯೋಜನೆ ಜಾರಿಗಾಗಿ ಅರಮನೆ ಮೈದಾನ ಹಾಗೂ ಗಾಲ್ಪಕ್ಲಬ್‍ನ ಭೂ ಸ್ವಾೀಧಿನಕ್ಕೂ ಸಿದ್ದತೆ ಮಾಡಿಕೊಳ್ಳಲಾಗಿದೆ.
ಬಿಬಿಎಂಪಿ ಅಧಿಕಾರಿಗಳಿಂದ ಯೋಜನೆಯ ವಿನ್ಯಾಸ, ಯೋಜನಾ ವೆಚ್ಚ, ಯೋಜನೆಯಿಂದಾಗುವ ಪರಿಣಾಮ, ಪರಿಸರ ಮೇಲೆ ಉಂಟಾಗುವ ಪರಿಣಾಮಗಳು ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಈ ಬಾರಿ ಯೋಜನೆ ಜಾರಿಗೆ ಯಾವುದೆ ಅಪಸ್ವರ ಕೇಳಿ ಬರದಿದ್ದರೆ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗಿನ ಮೇಲ್ಸೇತುವೆ ನಿರ್ಮಾಣವಾಗುವುದು ಬಹುತೇಕ ಖಚಿತಪಟ್ಟಿದೆ. ಒಂದು ವೇಳೆ ಯೋಜನೆ ಜಾರಿಯಾಗಿ ಮೇಲ್ಸೇತುವೆ ನಿರ್ಮಾಣವಾದರೆ ಕಾವೇರಿ ಜಂಕ್ಷನ್, ಮೇಖ್ರಿ ಸರ್ಕಲ್ ,ಗಂಗಾನಗರ ಮತ್ತು ಹೆಬ್ಬಾಳ ನಡುವಿನ ವಾಹನದಟ್ಟಣೆಗೆ ಪರಿಹಾರ ಸಿಕ್ಕಂತಾಗುತ್ತದೆ.

Articles You Might Like

Share This Article