‘ಹೋರಾಟಕ್ಕೆ ಆಹ್ವಾನ ಕೊಡಲು ಅದು ಬೀಗರೂಟ ಅಲ್ಲ’ : ಹೆಚ್ಡಿಕೆಗೆ ಚೆಲುವರಾಯಸ್ವಾಮಿ ಟಾಂಗ್

ಬೆಂಗಳೂರು, ಸೆ.14- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸಿ ಒಕ್ಕಲಿಗ ಸಮುದಾಯ ನಡೆಸಿದ ಹೋರಾಟಕ್ಕೆ ನಮಗೂ ಆಹ್ವಾನ ಇರಲಿಲ್ಲ. ಆಹ್ವಾನ ಕೊಡಲು ಅದು ಬೀಗರೂಟ ಆಗಿರಲಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಚೆಲುವರಾಯಸ್ವಾಮಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದಾಯದ ಹೋರಾಟಕ್ಕೆ ನೈತಿಕ ಬೆಂಬಲ ಕೊಡುವ ದೃಷ್ಟಿಯಿಂದ ನಾವೆಲ್ಲ ಭಾಗವಹಿಸಿದ್ದೆವು. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಶಿವಕುಮಾರ್ ಏನೇಲ್ಲಾ ಮಾಡಿದ್ದರು, ಎಷ್ಟು ಶ್ರಮ ಪಟ್ಟರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ಹಳೆ ಮೈಸೂರು ಭಾಗದ ಜನ ಅವರಿಗೆ ಶಕ್ತಿ ಕೊಟ್ಟಿದ್ದಾರೆ. ಅವರು ಏನು ಮಾಡಿದರೂ ನಡೆಯುತ್ತದೆ ಎಂಬ ಮನೋಭಾವ ಸಮುದಾಯದಲ್ಲಿದೆ. ಇನ್ನು ಮುಂದೆ ಸಮುದಾಯ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದರು. ಹೋರಾಟದಲ್ಲಿ ಭಾಗವಹಿಸಲು ನನಗೆ ಆಹ್ವಾನ ಇರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾದರೆ ನಮಗೆ ಆಹ್ವಾನವಿತ್ತೆ ಎಂದಿರುವ ಅವರು, ಅಷ್ಟಕ್ಕೂ ಆಹ್ವಾನಿಸಲು ಇದು ಬೀಗರೂಟವೇ ಎಂದು ಪ್ರಶ್ನಿಸಿದ್ದಾರೆ.

1960ರಿಂದ ಹಲವು ಪಕ್ಷಗಳು ರಾಜ್ಯವನ್ನು ಆಳಿವೆ. ಆದರೆ, ಕಾಂಗ್ರೆಸ್ ಹೊರತುಪಡಿಸಿ ಯಾವ ಪಕ್ಷಗಳ ಸರ್ಕಾರವು ಪೂರ್ಣಾವಧಿಯನ್ನು ಮುಗಿಸಿಲ್ಲ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸರ್ಕಾರ ಪತನವಾದ ಬಳಿಕ ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಆರ್.ಶ್ರೀನಿವಾಸ್ ಸೇರಿದಂತೆ ಹಲವಾರು ಮಂದಿ ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಗೊಂದಲಗಳ ಕಾರಣಕ್ಕಾಗಿಯೇ ನಾವು ಕೂಡ ಪಕ್ಷಬಿಟ್ಟು ಹೊರ ಬಂದಿದ್ದೆವು ಎಂದು ಚೆಲುವರಾಯಸ್ವಾಮಿ ಹೇಳಿದರು.

Sri Raghav

Admin