ಬೆಂಗಳೂರು,ಮಾ.7- ಚಾಮರಾಜನಗರ ಮತ್ತು ಹನೂರು ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಹಣಕಾಸಿನ ಲಭ್ಯತೆ ಆಧಾರದ ಮೇಲೆ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಿಧಾನಸಭೆಯಲ್ಲಿಂದು ತಿಳಿಸಿದರು.
ಶಾಸಕ ನರೇಂದ್ರ.ಆರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಲೆಮಹದೇಶ್ವರ ಬೆಟ್ಟಕ್ಕೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಜನರು ಪ್ರತಿದಿನ ಆಗಮಿಸುತ್ತಾರೆ. ಬರುವ ಭಕ್ತರಿಗೆ ಉತ್ತಮ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಆದ್ಯಕರ್ತವ್ಯ. ಹನೂರು ಮತ್ತು ಚಾಮರಾಜನಗರ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ದಿ ಪಡಿಸಲಾಗುವುದು ಎಂದರು.
2020-21ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ರಾಜ್ಯದ 15,010 ಕಿ.ಮೀ ಗ್ರಾಮೀಣ ರಸ್ತೆಯನ್ನು, 9601 ಕಿ.ಮೀ ಜಿಲ್ಲಾ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ ಎಂದರು. ಇಲಾಖೆಯಲ್ಲಿ ಲಭ್ಯವಿರುವ ಹಣಕಾಸಿನ ಸ್ಥಿತಿಗತಿ ಅರ್ಥ ಮಾಡಿಕೊಂಡು ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಶಾಸಕ ಅಜಯ್ ಧರ್ಮಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಸಿ.ಸಿ.ಪಾಟೀಲ್ ಅವರು, ಕಳೆದ ಮೂರು ವರ್ಷಗಳ ಅವಯಲ್ಲಿ ಕಲಬುರಗಿ ಜಿಲ್ಲೆಗೆ ಲೋಕೋಪಯೋಗಿ ಇಲಾಖೆಯಿಂದ ಅಪೆಂಡೆಕ್ಸ್ ಇ ಲೆಕ್ಕ ಶೀರ್ಷಿಕೆಯಡಿ ಒಟ್ಟು 82.47 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಂತೆ ಯಾವುದೇ ಕ್ಷೇತ್ರಗಳನ್ನು ಕಡೆಗಣಿಸದೆ ಎಲ್ಲರಿಗೂ ಸಮಾನ ರೀತಿಯಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.
