ಈಸಂಜೆ ಫಲಶೃತಿ : ಅಣ್ಣ-ತಂಗಿಯ ಬದುಕಿಗೆ ಸ್ಪಂದಿಸಿದ ಅಧಿಕಾರಿಗಳು

ಹನೂರು, ಸೆ.12- ಮಾದ ಮತ್ತು ರಂಗಿಯ ಬದುಕಿಗೆ ಬೆಳದಿಂಗಳಾದ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳರವರು ವೈಯಕ್ತಿಕ ಖರ್ಚಿನಿಂದ ಮನೆ ದುರಸ್ತಿಪಡಿಸಿ ವಿಧ್ಯುತ್ ಸಂಪರ್ಕ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೌಳ್ಳಿಹಳ್ಳ ಡ್ಯಾಂ ಸೋಲಿಗ ಜನಾಂಗದ ನಿವಾಸಿಗಳಾದ ಅಣ್ಣ ಮಾದ(50) ತಂಗಿ ರಂಗಿ (45) ಅವರ ಬದುಕಿನ ಕಥೆಗೆ ಸಂಬಂಧಿಕರೊಬ್ಬರು ಬಿಟ್ಟರೆ ಕೌಳ್ಳಿಹಳ್ಳ ಡ್ಯಾಂ ಸ್ಥಳೀಯರೆ ಅನ್ನ ನೀರು ನೀಡುತ್ತಾ ಅನ್ನ ದಾತರೆನಿಸಿಕೊಂಡಿದ್ದಾರೆ.

ಸ್ವಾಧೀನವಿಲ್ಲದ ಕೈ, ಕಾಲು ಕಿವುಡು ಮತ್ತು ಬುದ್ದಿಮಾಂಧ್ಯತೆ ಮಾದನಿಗೆ 600 ರೂ. ಪಿಂಚಣಿ ಹಣ ಬಿಟ್ಟರೆ ಬೇರೆ ಆದಾಯವಿಲ್ಲ. ತಂಗಿ ರಂಗಿಗೆ ಅನಾರೋಗ್ಯ ಕಣ್ಣು ಕಾಣಲ್ಲ. ಕಿವಿ ಕೇಳಲ್ಲ.  ಆಧಾರ್ ಮತದಾರರ ಗುರುತಿನ ಚೀಟಿ ಯಾವುದು ಇಲ್ಲ. ಹಾಗಾಗಿ ರಂಗಿಗೆ ಪಿಂಚಣಿ ಹಣವೂ ಇಲ್ಲ.

ಸೂರಿನೊಳಗೆ ಇಣುಕಿ ನೋಡಿದರೆ ಯಾವುದೋ ಚಲನಚಿತ್ರದ ದೃಶ್ಯವಳಿಗಳನ್ನು ಮೀರಿಸುವಂತೆ ಇಲಿ-ಹೆಗ್ಗಣಗಳು ಕೊರೆದು ಗುಡ್ಡೆ ಹಾಕಿರುವ ಮಣ್ಣಿನ ರಾಶಿಗಳು ಎಲ್ಲಾದರಲ್ಲಿ ಚೆಲ್ಲ ಪಿಲ್ಲಿಯಾಗಿ ಬಿದ್ದಿರುವ ಪಾತ್ರೆ ಪಗಡೆ ಮತ್ತು ಬಟ್ಟೆಗಳು ಕಂಡು ಬರುತ್ತಿತ್ತು. ಇವರ ಬದುಕು ಕಾಡು ಪ್ರಾಣಿಗಳಿಗಿಂತಲೂ ಹೀನಾಯ ಸ್ಥಿತಿಯಲ್ಲಿದೆ. ಸರ್ಕಾರದ ಕಣ್ತೆರೆಯ ಬೇಕು. ಎಂಬ ಶೀರ್ಷಿಕೆಯಡಿ ಈ ಸಂಜೆ ಪತ್ರಿಕೆ ಇವರಿಬ್ಬರ ಕುರಿತು ವರದಿ ಮಾಡಿತ್ತು.

ಸುದ್ದಿ ಅರಿತು ಸಹಾಯಕ್ಕೆ ಮುಂದಾದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳ ಅವರು ಸರ್ಕಾರಿ ಅನುಧಾನಕ್ಕೆ ಕಾಯದೇ ವೈಯಕ್ತಿಕ ಸ್ವಂತ ಖರ್ಚಿನಲ್ಲಿಯೇ ಮಾದ ಮತ್ತು ರಂಗಿಯ ವಿರೂಪವನ್ನು ತೊಲಗಿಸಲು ಯತ್ನಿಸಿದ್ದಾರೆ.

ಬೆಳೆದ ಕೂದಲು ಕತ್ತರಿಸಿ ಕೊಳಕು ಬಟ್ಟೆಗಳನ್ನು ಶುಭ್ರಗೊಳಿಸಿದ್ದಲ್ಲದೆ ಮನೆಯೊಳಗಿದ್ದ ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಮೇಲ್ಚಾವಣಿ ಶೀಟ್ ಹಾಕಿಸಿ ಮನೆಯೊಳಗೆ ಜಲ್ಲಿ ಕಲ್ಲು ಸಿಮೆಂಟ್ ಹಾಕಿಸಿ ಗಾರೆ ಹಾಕಿದ್ದಾರೆ. ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಿ ಮನೆಗೆ ಬಣ್ಣ ಬಳಿಯುವ ಕೆಲಸವನ್ನು ಸಹ ಮುಗಿಸಿದ್ದಾರೆ. ಅಲ್ಲದೆ ಇವರ ಆರೋಗ್ಯ ಬಗ್ಗೆ ಕಾಳಜಿ ವಹಿಸಿ ವೈದ್ಯರ ಬಳಿ ತಪಾಸಣೆ ಮಾಡಿಸಿದರು.

ಇದಲ್ಲದೆ ಮಾದ ಮತ್ತು ರಂಗಿಯ ಅಕ್ಕನ ಮಗಳನ್ನು ನಿತ್ಯ ಅವರ ಯೋಗಕ್ಷೇಮ ನೋಡಿಕೊಳ್ಳಲು ನೇಮಿಸಿದ್ದಾರೆ. ಹಾಗೂ ಮಾದ ಮತ್ತು ರಂಗಿಗೆ ಸೋಲಿಗರ ಖೋಟಾದಲ್ಲಿ ಬರುತ್ತಿದ್ದ ಆಹಾರ ಪದಾರ್ಥಗಳನ್ನು ಅವರಿಗೂ ನೀಡುವಂತೆ ಆದೇಶಿಸಿದ್ದಾರೆ. ಜತೆಗೆ ಹೀಗೆ ಅವರ ಯೋಗ್ಯಕ್ಷೇಮ ನೋಡಿ ಕೊಂಡಿದ್ದಾರೆ ಇಲಾಖೆಯಲ್ಲಿ ಯಾವುದಾದರೂ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ.

ಇಷ್ಟಲ್ಲದೆ ರಂಗಿಗೂ ಪಿಂಚಣಿ ಬರುವಂತೆ ಮಾಡಲು ದಾಖಲೆ ಸಂಗ್ರಹಿಸುವಂತೆ ಸ್ಥಳೀಯ ವಿಕಲ ಚೇತನರೊಬ್ಬರನ್ನು ನೇಮಿಸಿದ್ದಾರೆ. ಮತ್ತು ಗ್ರಾ.ಪಂ. ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತುರ್ತಾಗಿ ಶೌಚಾಲಯ ಮತ್ತು ಸ್ನಾನದ ಮನೆ ನಿರ್ಮಿಸುವಂತೆ ಸೂಚಿಸಿದ್ದಾರೆ. ವಿಷಯ ಅರಿತು ಲೊಕ್ಕನಹಳ್ಳಿ ಪೋಸ್ಟ್ ಆಫೀಸ್ ಅಧಿಕಾರಿ ಭಾಗ್ಯರಾಜ್ ಸ್ಥಳಕ್ಕಾಗಮಿಸಿ ಮಾದ ಮತ್ತು ರಂಗಿಯ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಪ್ರತಿ ತಿಂಗಳ ಪಿಂಚಣಿ ಹಣವನ್ನು ತಾವೇ ಖುದ್ದು ತಲುಪಿಸುವುದಾಗಿ ತಿಳಿಸಿದ್ದಾರೆ.

ಆ ಭಾಗದಲ್ಲಿ ಪರಿಸರ ಪ್ರೇಮಿ ಹಾಗೂ ಅರಣ್ಯ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಅವರು ಕಷ್ಟದಲ್ಲಿರುವ ಸಾಮಾನ್ಯ ಜನರ ಕಷ್ಟಕ್ಕೆ ಸದಾ ಮುಂದಾಗಿದ್ದಾರೆ. ಈ ಸಂಜೆ ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ದಿ ಓದಿ ದಾನಿಗಳು ಸಹಾಯ ಮಾಡಲು ಮುಂದಾಗಿದ್ದು, ಮಾದ ಮತ್ತು ರಂಗಿಯ ಪೂರ್ಣ ವಿಳಾಸ ನೀಡುವಂತೆ ಕರೆ ಮಾಡುತ್ತಿದ್ದು, ವಿಳಾಸ ಒದಗಿಸಿ ಕೊಡುವ ಕೆಲಸವನ್ನು ಮಾಡಲಾಗುತ್ತಿದೆ.