ಬೆಂಗಳೂರು,ಜು.12- ಈದ್ಗಾ ಮೈದಾನ ಬಿಬಿಎಂಪಿ ಸ್ವತ್ತು ಎಂದು ಆಗ್ರಹಿಸಿ ಇಂದು ಕರೆ ನೀಡಲಾಗಿರುವ ಚಾಮರಾಜಪೇಟೆ ಬಂದ್‍ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಚಾಮರಾಜಪೇಟೆ ಸುತ್ತಮುತ್ತಲ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಲಾಗಿದೆ. ನಾವು ಕರೆ ನೀಡಿರುವ ಬಂದ್‍ಗೆ ಸ್ಥಳೀಯರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಚಾಮರಾಜಪೇಟೆ ನಾಗರೀಕರ ಒಕ್ಕೂಟ ವೇದಿಕೆಯ ಕಾರ್ಯದರ್ಶಿ ರುಕ್ಮಾಂಗದ ತಿಳಿಸಿದ್ದಾರೆ.
ಈದ್ಗಾ ಮೈದಾನದ ಸುತ್ತಮುತ್ತ ಇರುವ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ತರಕಾರಿ, ಮೆಡಿಕಲ್ ಶಾಪ್‍ಗಳು ಮಾತ್ರ ಓಪನ್ ಆಗಿದ್ದು, ಬೆಳಿಗ್ಗೆ ಹಾಲು ಮಾರಾಟ ಮಾತ್ರ ಮಾಡಲಾಗಿತ್ತು.
ಕೆಲ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲಲ್ಲಿ ಆಟೋ ಮತ್ತಿತರ ವಾಹನಗಳ ಸಂಚಾರ ಕಂಡು ಬರುತ್ತಿದೆ.
ಚಾಮರಾಜಪೇಟೆ ಬಂದ್ ಯಶಸ್ವಿಯಾಗಿರುವುದರಿಂದ ನಾವು ಯಾವುದೇ ಪ್ರತಿಭಟನೆ ಮಾಡುವುದಿಲ್ಲ. ಜನರೇ ಸ್ವಯಂಪ್ರೇರಿತರಾಗಿ ಬಂದ್‍ಗೆ ಬೆಂಬಲ ನೀಡಿದ್ದಾರೆ. ಒಂದೇರಡು ದಿನಗಳ ನಂತರ ಮತ್ತೆ ಬೈಕ್ ರ್ಯಾಲಿ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ಸರ್ಪಗಾವಲು: ಚಾಮರಾಜಪೇಟೆಯನ್ನು ಎಂಟು ಸೆಕ್ಟರ್‍ಗಳು ಹಾಗೂ 15 ಜಂಕ್ಷನ್‍ಗಳಾಗಿ ವಿಂಗಡಿಸಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಎಂಟು ಸೆಕ್ಟರ್‍ಗಳಿಗೆ ಒಬ್ಬೊಬ್ಬ ಇನ್ಸ್‍ಪೆಕ್ಟರ್‍ಗಳನ್ನು ಉಸ್ತುವಾರಿಯನ್ನಾಗಿ ಮಾಡಿ 15 ಜಂಕ್ಷನ್‍ಗಳಲ್ಲಿ ಒಬ್ಬ ಪಿಎಸ್‍ಐ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.ಮಾತ್ರವಲ್ಲ ಈದ್ಗಾ ಮೈದಾನದ ಸುತ್ತಮುತ್ತ ಮಫ್ತಿ ಗಸ್ತು ಹಾಗೂ ಹೋಯ್ಸಳ ವಾಹನಗಳು ರೌಂಡ್ಸ್ ಹಾಕುತ್ತಿವೆ.
ಪೊಲೀಸರ ಜೊತೆ ಮಾತಿನ ಚಕಮಕಿ: ಈದ್ಗಾ ಮೈದಾನದ ಸುತ್ತಮುತ್ತ ಜನ ಗುಂಪುಗೂಡಬಾರದು ಎಂದು ಪೊಲೀಸರು ಸೂಚಿಸಿದ್ದರೂ ಜನ ಗುಂಪು ಗುಂಪಾಗಿ ಬಂದು ಮೈದಾನ ಪ್ರವೇಶಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಮೈದಾನ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದಾಗ ಪೊಲೀಸರು ಹಾಗೂ ನಾಗರೀಕರ ನಡುವೆ ವಾಗ್ವಾದ ನಡೆಯಿತು.
ಇಂದು ನಮ್ಮ ಮೈದಾನ, ನಾವ್ಯಾಕೆ ಹೊರಗೆ ಹೋಗಬೇಕು ಎಂದು ಕೆಲವರು ಪಟ್ಟು ಹಿಡಿದು ಈದ್ಗಾ ಮೈದಾನ ನಮ್ಮದು ಎಂದು ಘೋಷಣೆ ಕೂಗಿದರು. ತಕ್ಷಣ ಪೊಲೀಸರು ಘೋಷಣೆ ಕೂಗಿದವರನ್ನು ಬಲವಂತವಾಗಿ ಹೊರ ಕಳುಹಿಸುವಲ್ಲಿ ಯಶಸ್ವಿಯಾದರು.
ಚಾಮರಾಜಪೇಟೆಗೆ ಸೀಮಿತವಾದ ಬಂದ್: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಏಳು ವಾರ್ಡ್‍ಗಳಿದ್ದು, ಇಂದು ಕರೆ ನೀಡಲಾಗಿದ್ದ ಬಂದ್ ಕೇವಲ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿತ್ತು. ಗೋರಿಪಾಳ್ಯ, ಜೆ.ಜೆ.ನಗರ, ಕೆ.ಆರ್.ಮಾರುಕಟ್ಟೆ, ರಾಯಪುರಂ, ಪಾದರಾಯನಪುರ, ಭಕ್ಷಿ ಗಾರ್ಡನ್ ಹಾಗೂ ಆಜಾದ್‍ನಗರ ವಾರ್ಡ್‍ಗಳಲ್ಲಿ ಜನಜೀವನ ಸಾಮಾನ್ಯವಾಗಿತ್ತು.
ಬೂದಿ ಮುಚ್ಚಿದ ಕೆಂಡ: ಚಾಮರಾಜಪೇಟೆಯಲ್ಲಿ ಇಂದು ಯಾವುದೇ ಪ್ರತಿಭಟನೆ ನಡೆದಿಲ್ಲ. ಮೈದಾನ ನುಗ್ಗಲು ಯತ್ನಿಸಿದ ಕೆಲವರನ್ನು ಬಲವಂತವಾಗಿ ಹೊರ ಹಾಕಿರುವುದರಿಂದ ಸ್ಥಳದಲ್ಲಿ ಶಾಂತ ವಾತಾವರಣ ಇದ್ದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವುದರಿಂದ ಪೊಲೀಸರು ಆಯಾಕಟ್ಟಿನ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಯಾವುದೇ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸಿದ್ದಾರೆ.