ಬೆಂಗಳೂರು.ಜು.10-ಚಾಮರಾಜಪೇಟೆಯ ಈದ್ಗಾ ಮೈದಾನ ವಿಚಾರದಲ್ಲಿ ಬಿಬಿಎಂಪಿ ಆಯುಕ್ತರು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಬೆಂಗಳೂರು ಎಎಪಿ ಸಂಘಟನಾ ಕಾರ್ಯದರ್ಶಿ ಹಾಗೂ ಪಕ್ಷದ ಚಾಮರಾಜಪೇಟೆ ಅಧ್ಯಕ್ಷ ಜಗದೀಶ್ ಚಂದ್ರ, ಬಿಬಿಎಂಪಿ ಆಯುಕ್ತ ತುರ್ಷಾ ಗಿರಿನಾಥ್ರವರು ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಸಂಬಂಧಿಸಿ ದ್ವಂದ್ವ ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ.
ಅವರು ಒಮ್ಮೆ ಇದನ್ನು ವಕï ಆಸ್ತಿ ಎಂದರೆ ಕರೆದರೆ, ಮತ್ತೊಮ್ಮೆ ಬಿಬಿಎಂಪಿ ಆಸ್ತಿ ಎಂದು ಹೇಳಿಕೆ ನೀಡಿದ್ದಾರೆ. ಪ್ರಕರಣದ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳುವುದರಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಆಯುಕ್ತರ ಬೇಜವಾಬ್ದಾರಿಯಿಂದಾಗಿ ಈದ್ಗಾ ಮೈದಾನವು ವಿವಾದಿತ ಸ್ಥಳವಾಗುತ್ತಿದೆ ಎಂದು ಹೇಳಿದರು.
ಈದ್ಗಾ ಮೈದಾನದಲ್ಲಿ ಕುರಿ ವ್ಯಾಪಾರದ ವೇಳೆ ತೆರಿಗೆ ಸಂಗ್ರಹಿಸುವ ಬಿಬಿಎಂಪಿಯು ನಂತರ ಆ ಸ್ಥಳವನ್ನು ಸ್ವಚ್ಛಗೊಳಿಸುವ ಪರಿಪಾಠ ಅನೇಕ ವರ್ಷಗಳಿಂದ ಜಾರಿಯಲ್ಲಿದೆ. ಆದರೆ ಇನ್ನುಮುಂದೆ ಸ್ಥಳವನ್ನು ಸ್ವಚ್ಛಗೊಳಿಸುವುದಿಲ್ಲ ಎಂದು ಆಯುಕ್ತರು ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ.
ಮೈದಾನವು ಸ್ವಚ್ಛಗೊಳ್ಳದಿದ್ದರೆ ಸುತ್ತಮುತ್ತ ಪ್ರದೇಶಗಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದೆ. ಇನ್ನಾದರೂ ತುರ್ಷಾ ಗಿರಿನಾಥ್ರವರು ಪ್ರಕರಣದ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳಬೇಕು ಎಂದು ಜಗದೀಶ್ ಚಂದ್ರ ಹೇಳಿದರು.