ಪ್ರಥಮ ಧ್ವಜಾರೋಹಣಕ್ಕೆ ಚಾಮರಾಜಪೇಟೆ ಮೈದಾನ ಸಜ್ಜು, ಯಾರಾದ್ರೂ ಬಾಲ ಬಿಚ್ಚಿದ್ರೆ ಕಠಿಣ ಕ್ರಮ

Social Share

ಬೆಂಗಳೂರು, ಆ.12- ಚಾಮರಾಜಪೇಟೆ ಆಟದ ಮೈದಾನದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಸಕಲ ಸಿದ್ಧತೆಗಳು ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಪಶ್ಚಿಮ ವಿಭಾಗ ಪೊಲೀಸರು ಡಿಸಿಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಪಥ ಸಂಚಲನ
ನಡೆಸಿದರು.

ಸಿಎಆರ್, ಕೆಎಸ್‍ಆರ್‍ಪಿ ಹಾಗೂ ಸ್ಥಳೀಯ ಪೊಲೀಸರನ್ನೊಳಗೊಂಡ ಸುಮಾರು 300ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಟಿಪ್ಪು ನಗರ, ವಾಲ್ಮಿಕಿನಗರ, ಚಾಮರಾಜಪೇಟೆ ಸೇರಿದಂತೆ ವಿವಿಧೆಡೆ ಪಥ ಸಂಚಲನ ನಡೆಸಿ ಸಾರ್ವಜನಿಕರಿಗೆ ಭರವಸೆ ಮೂಡಿಸಿದ್ದಾರೆ.

ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರ್ಯೋತ್ಸವನ್ನು ಅದ್ಧೂರಿಯಾಗಿ ನಡೆಸಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಇಲ್ಲಿ ಭದ್ರತೆ ಕಲ್ಪಿಸುವುದು ದೊಡ್ಡ ಸವಾಲಾಗಿದೆ. ಈಗಾಗಲೇ ಚಾಮರಾಜಪೇಟೆ ಆಟದ ಮೈದಾನದ ವಿವಾದ ತಾರಕಕ್ಕೇರಿ ಸದ್ಯ ನಿಯಂತ್ರಣದಲ್ಲಿದ್ದು, ಸರ್ಕಾರದ ಮಧ್ಯಸ್ಥಿಕೆಯಲ್ಲಿ ಸಂಧಾನ ಪ್ರಕ್ರಿಯೆಗಳು ನಡೆದಿದೆ.

ಈ ನಡುವೆ ಪ್ರಪ್ರಥಮ ಬಾರಿಗೆ ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರಧ್ವಜರೋಹಣ ನಡೆಯುವುದು ಬಾರಿ ಕುತೂಹಲ ಕೆರಳಿಸಿದೆ. ಕೆಲ ಸಂಘಟನೆಗಳ ಮುಖಂಡರು ಹಾಗೂ ಸ್ಥಳೀಯ ಶಾಸಕರು ಕೂಡ ಅದ್ಧೂರಿಯಾಗಿ ಸ್ವಾತಂತ್ರ್ಯೋತ್ಸವ ಆಚರಿಸೋಣ ಎಂದು ಹೇಳಿದ್ದರು. ಈಗ ಸರ್ಕಾರವೇ ಎಲ್ಲಾ ವ್ಯವಸ್ಥೆ ಮಾಡಿರುವುದರಿಂದ ಯಾವುದೇ ರೀತಿಯಲ್ಲೂ ಭದ್ರತೆಗೆ ಲೋಪವಾಗದಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಲು ಪೊಲೀಸರು ಟೊಂಕಕಟ್ಟಿ ನಿಂತಿದ್ದಾರೆ.

ಜಿಲ್ಲಾಡಳಿತದವತಿಯಿಂದ ಸ್ವಾತಂತ್ರೋತ್ಸವ ಆಚರಣೆ ನಡೆಯುತ್ತಿದ್ದು, ಧ್ವಜಾರೋಹಣವನ್ನು ಉತ್ತರ ವಲಯ ಸಹಾಯಕ ಆಯುಕ್ತರು ನೇರವೇರಿಸಲಿದ್ದಾರೆ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಯಾರಾದರೂ ಬಾಲ ಬಿಚ್ಚಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸಂದೇಶ ರವಾನಿಸಿದ್ದಾರೆ.

ಬೆಳಗ್ಗೆಯಿಂದಲೇ ಚಾಮರಾಜಪೇಟೆಯ ಮೈದಾನ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ಮೈದಾನದಲ್ಲಿ ಶಾಲಾ ಮಕ್ಕಳು, ಎನ್‍ಸಿಸಿ, ಸ್ಕೌಟ್ಸ್‍ಮತ್ತು ಗೈಡ್ಸ್, ಪೊಲೀಸರು ಸೇರಿದಂತೆ ಹಲವರು ತಾಲೀಮು ನಡೆಸಿದ್ದಾರೆ.

Articles You Might Like

Share This Article