ಬೆಂಗಳೂರು,ಆ.15-ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಇದೆ ಮೊದಲ ಬಾರಿಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು. ಸಂಸದ ಪಿ.ಸಿ.ಮೋಹನ್ ಹಾಗೂ ಶಾಸಕ ಜಮೀರ್ ಆಹ್ಮದ್‍ಖಾನ್, ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ಸಮ್ಮುಖದಲ್ಲಿ ಕಂದಾಯ ಇಲಾಖೆ ಉಪವಿಭಾಗಾಧಿಕಾರಿ ಶಿವಣ್ಣ ಅವರು ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣದ ನಂತರ ರಾಷ್ಟ್ರಗೀತೆ, ರೈತ ಗೀತಾ ಗಾಯನದ ಜೊತೆಗೆ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು.
ಚಾಮರಾಜಪೇಟೆ ಬಾಲಕಿಯ ಪ್ರೌಢಶಾಲೆ ಮಕ್ಕಳು ಒನಕೆ ಓಬವ್ವ , ಕಿತ್ತೂರು ರಾಣಿ ಚನ್ನಮ್ಮ ಹಾಗೂ ಝಂಡಾ ಉಂಛೆ ರಹೇ ಹಮಾರಾ ಸಮೂಹಿಕ ಗೀತಾ ಗಾಯನ ನಡೆಯಿತು. ಬಿಬಿಎಂಪಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ವೀರಗಾಸೆ, ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಮಕ್ಕಳು ದೇಶ ಭಕ್ತಿಗೀತೆಯೊಂದಿಗೆ ನೃತ್ಯ ಪ್ರದರ್ಶನ ನೆರವೇರಿಸಿಕೊಟ್ಟರು.
ಪೊಲೀಸ್ ಸರ್ಪಗಾವಲು: ಧ್ವಜಾರೋಹಣ ನೆರವೇರಿದ ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಮೂವರು ಡಿಸಿಪಿಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಸ್ವತಃ ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ದರು.
ಸಮಾರಂಭ ಆರಂಭಕ್ಕೂ ಮುನ್ನ ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸಲಾಯಿತು.
ಮಫ್ತಿಯಲ್ಲಿಯೂ ಮೈದಾನದ ಹೊರ ಭಾಗದಲ್ಲಿದ್ದ ನೂರಾರು ಪೊಲೀಸರು ಸಮೀಪದ ಮಹಡಿಗಳ ಮೇಲೆ ನಿಂತು ನಿಗಾ ವಹಿಸಿದ್ದರು.
ಅಲರ್ಟ್: ಇದೇ ಮೊದಲ ಬಾರಿಗೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸುತ್ತಿರುವ ಹಿನ್ನಲೆಯಲ್ಲಿ ಈದ್ಗಾ ಮೈದಾನದದ ಅಷ್ಟ ದಿಕ್ಕುಗಳಲ್ಲಿ 250 ಮಂದಿ ಆರ್‍ಎಎಫ್ ತುಕಡಿಗಳು ಅಲರ್ಟ್ ಆಗಿದ್ದವು. ಮೈದಾನದ ನಾಲ್ಕು ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಯಾವುದೇ ವಾಹನ ನಿಲ್ಲಿಸಲು ಹಾಗೂ ಜನ ಗುಂಪುಗೂಡಲು ಅವಕಾಶ ನಿರಾಕರಿಸಲಾಗಿತ್ತು.
ಮೈದಾನದ ಜೊತೆ ಈದ್ಗಾ ಟವರ್‍ಗೂ ಪ್ರತ್ಯೇಕ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಎಸಿಪಿ ನೇತೃತ್ವದಲ್ಲಿ ಮೂವರು ಇನ್ಸ್‍ಪೆಕ್ಟರ್‍ಗಳು ಸೇರಿದಂತೆ ಒಂದು ಕೆಎಸ್‍ಆರ್‍ಪಿ ತುಕಡಿಯನ್ನು ನಿಯೋಜಿಸಲಾಗಿತ್ತು.
ಆರ್‍ಎಎಫ್ ಮತ್ತು ಸ್ವಾಟ್ ತುಕಡಿಗಳು ಸೇರಿದಂತೆ ಸ್ಥಳೀಯ ಪೆÇಲೀಸರು ಇಡೀ ಮೈದಾನಕ್ಕೆ ಸರ್ಪಗಾವಲು ಹಾಕಿದ್ದರು.
ಪ್ರತ್ಯೇಕ ಸ್ಥಳಾವಕಾಶ: ಸಮಾರಂಭಕ್ಕೆ ಆಗಮಿಸಿದ್ದ ಮುಸಲ್ಮಾನ್ ಮುಖಂಡರುಗಳಿಗೆ ಪ್ರತ್ಯೇಕ ಸ್ಥಳವಕಾಶ ಕಲ್ಪಿಸಲಾಗಿತ್ತು.
ಖುಷಿ ತಂದಿದೆ; ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿರುವುದು ನನಗೆ ಖುಷಿ ತಂದಿದೆ ಎಂದು ಸ್ಥಳೀಯ ಶಾಸಕ ಜಮೀರ್ ಆಹ್ಮದ್‍ಖಾನ್ ತಿಳಿಸಿದರು. ಧ್ವಜಾರೋಹಣ ಮಾಡುವುದಕ್ಕೆ ನಾನು ಸಮ್ಮತಿಸಿದ್ದೆ, ಇದೀಗ ಇಲ್ಲಿ ಧ್ವಜಾರೋಹಣ ಮಾಡಿರುವುದು ಖುಷಿ ತಂದಿದೆ. ಎಲ್ಲರಿಗೂ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳನ್ನು ಕೊರುತ್ತೆನೆ ಎಂದರು.
ಮುಂದೆ ಇದೇ ಮೈದಾನದಲ್ಲಿ ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಬೇರೆ ಹಬ್ಬಗಳನ್ನು ಆಚರಿಸುವ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪೊಲೀಸರಿಂದ ಧನ್ಯವಾದ: ಯಾವುದೇ ಆಹಿತಕರ ಘಟನೆ ಜರುಗದಂತೆ ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲು ಸಹಕರಿಸಿದ ಸ್ಥಳಿಯ ಜನರಿಗೆ ಪೊಲೀಸರು ಧನ್ಯವಾದ ಅರ್ಪಿಸಿದರು.
ಮೈದಾನಕ್ಕೆ ಕಳೆದ 10 ದಿನಗಳಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹಲವಾರು ದಿನಗಳಿಂದ ಇಲ್ಲಿ ಪೊಲೀಸ್ ಪರೇಡ್ ನಡೆಸಲಾಗಿತ್ತು. ಇದೀಗ ಇಲ್ಲಿ ಶಾಂತ ರೀತಿಯಿಂದ ಸಮಾರಂಭ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.






