ಬೆಂಗಳೂರು,ಸೆ.27- ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ ಇನ್ನು ತಣ್ಣಗಾದಂತೆ ಕಾಣುತ್ತಿಲ್ಲ. ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಪಟ್ಟು ಹಿಡಿದಿದ್ದ ಹಿಂದೂಪರ ಸಂಘಟನೆಗಳು ಅನುಮತಿ ಸಿಗದ ಕಾರಣ ನಿರಾಸೆಗೊಂಡಿದ್ದರು.
ಗಣೇಶೋತ್ಸವದ ಸಂದರ್ಭದಲ್ಲಿ ತಣ್ಣಗಾಗಿದ್ದ ಹಿಂದೂ ಪರ ಸಂಘಟನೆಗಳ ಮುಖಂಡರು ಇದೀಗ ಕನ್ನಡ ರಾಜ್ಯೋತ್ಸವ ಆಚರಣೆಗೆ ಪಟ್ಟು ಹಿಡಿದಿದ್ದಾರೆ. ಇದರಿಂದ ಕಂದಾಯ ಇಲಾಖೆಗೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಕೇವಲ ಕನ್ನಡ ಪರ ಹಾಗೂ ಹಿಂದೂಪರ ಸಂಘಟನೆಗಳಲ್ಲದೆ ಕನ್ನಡ ಸಾಹಿತ್ಯ ಪರಿಷತ್ ಕೂಡ ಮೈದಾನದಲ್ಲಿ ನಾಡಧ್ವಜ ಹಾರಿಸುವಂತೆ ಒತ್ತಡ ಹಾಕಿದೆ.
ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಾಟಕ್ಕೆ ಅನುಮತಿ ನೀಡಿದ್ದಂತೆ ನವಂಬರ್ ಒಂದರಂದು ಆಚರಿಸುವ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಧ್ವಜ ಹಾರಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ಚಾಮರಾಜಪೇಟೆ ನಾಗರೀಕರ ಒಕ್ಕೂಟ ತೀರ್ಮಾನಿಸಿದೆ.
ಈ ಕುರಿತಂತೆ ನಿನ್ನೆ ಸಭೆ ನಡೆಸಿದ ಒಕ್ಕೂಟದ ಪದಾಕಾರಿಗಳು ಕನ್ನಡ ಧ್ವಜ ಹಾರಾಟಕ್ಕೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಳ್ಳಲು ತೀರ್ಮಾನಿಸಿದ್ಧಾರೆ ಎಂದು ಒಕ್ಕೂಟದ ಖಜಾಂಚಿ ಯಶವಂತ್ ತಿಳಿಸಿದ್ದಾರೆ.
ಕನ್ನಡ ಧ್ವಜ ಹಾರಿಸಲು ನಮ್ಮ ಒಕ್ಕೂಟಕ್ಕೆ ಅವಕಾಶ ಮಾಡಿಕೊಡುವಂತೆ ನಾವು ಪಟ್ಟು ಹಿಡಿಯುವುದಿಲ್ಲ. ಕಳೆದ 2006ರಲ್ಲೇ ಶಾಸಕ ಜಮೀರ್ ಆಹ್ಮದ್‍ಖಾನ್ ಅವರು ಮೈದಾನದಲ್ಲಿ ಕನ್ನಡ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿದ್ದರು. ಈಗಲೂ ಅವರೇ ಧ್ವಜ ಹಾರಿಸಲಿ ಎಂದು ಅವರು ಸಲಹೆ ನೀಡಿದರು.
ಈದ್ಗಾ ಮೈದಾನ ಸರ್ಕಾರಿ ಸ್ವತ್ತು ಎಂದು ಘೋಷಣೆಯಾದ ಮೇಲೆ ಅಲ್ಲಿ ಕನ್ನಡ ಧ್ವಜ ಹಾರಿಸುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ಧಾರೆ.