ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ..?

Social Share

ಬೆಂಗಳೂರು,ಆ.27- ವಿವಾದಿತ ಚಾಮರಾಜ ಪೇಟೆಯ ಮೈದಾನದಲ್ಲಿ ಈ ಬಾರಿ ಸಾರ್ವಜನಿಕರ ಕೋರಿಕೆಯಂತೆ ಷರತ್ತುಬದ್ದ ಗಣೇಶ ಉತ್ಸವಕ್ಕೆ ಅನುಮತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮೈದಾನದಲ್ಲಿ ಕೇವಲ 3 ದಿನ ಮಾತ್ರ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಲಾಗಿದ್ದು, ಯಾವುದೇ ಸಂಘಟನೆಗಳು ಇಲ್ಲವೆ ನಾಗರಿಕ ಸಮಿತಿಗಳು ಅನುಮತಿ ಪಡೆಯದೆ ಉತ್ಸವ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಕಂದಾಯ ಇಲಾಖೆಯ ಪ್ರಧಾನಕಾರ್ಯದರ್ಶಿ ಹಾಗೂ ಬಿಬಿಎಂಪಿಯ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಧಾರ್ಮಿಕ ಆಚರಣೆಗಳನ್ನು ಆಚರಿಸಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಬಹುದು ಎಂದು ನಿನ್ನೆಯಷ್ಟೇ ಹೈಕೋರ್ಟ್‍ನ ದ್ವಿಸದಸ್ಯಪೀಠ ಮಹತ್ವದ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಜೊತೆಯೂ ಚರ್ಚಿಸಿ ಚಾಮರಾಜಪೇಟೆಯ ಆಟದ ಮೈದಾನದಲ್ಲಿ ಮೂರು ದಿನಗಳ ಗಣೇಶ ಉತ್ಸವಕ್ಕೆ ಅನುಮತಿ ನೀಡಲು ಸಭೆ ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದೆ.

ಸಂಘಟನೆಗಳು , ನಾಗರಿಕ ಒಕ್ಕೂಟ ಹಾಗೂ ಗಣೇಶ ಉತ್ಸವ ಸಮಿತಿಗಳು ಕಂದಾಯ ಇಲಾಖೆಯ ಬೆಂಗಳೂರಿನ ಉತ್ತರ ವಲಯದ ಸಹಾಯಕ ಆಯುಕ್ತರ(ಎಸಿ) ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಮೂರು ದಿನಗಳು ಮಾತ್ರ ಅವಕಾಶ ಕೊಡಬೇಕು. ಅನುಮತಿ ಇಲ್ಲದೆ ಯಾವುದೇ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು, ಧಾರ್ಮಿಕ ಚಟುವಟಿಕೆಗಳನ್ನು ನಡೆಸಬಾರದು ಎಂದು ಸೂಚಿಸಲಾಗಿದೆ.

ಪೂಜಾ ವಿವಿಧಾನಗಳನ್ನು ಬೆಳಗ್ಗೆ 6ರಿಂದ ಸಂಜೆ 6ರೊಳಗೆ ಮುಗಿಸಬೇಕು. ಅತಿಯಾದ ಡಿಜೆ ಬಳಕೆ, ಇತರರಿಗೆ ತೊಂದರೆಯಾಗುವ ರೀತಿಯಲ್ಲಿ ಆರ್ಕೆಸ್ಟ್ರಾ ನಡೆಸದೆ ಇರುವುದು ಸೇರಿದಂತೆ ಸಹಾಯಕ ಆಯುಕ್ತರು ನಿಬಂಧನೆಗಳನ್ನು ಹಾಕಬೇಕೆಂದು ಸರ್ಕಾರ ನಿರ್ದೇಶನ ಕೊಟ್ಟಿದೆ.

ಇದು ಸೂಕ್ಷ್ಮ ಪ್ರದೇಶವಾಗಿರುವುದರಿಂದ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡುವುದು ಹಾಗೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕೆಲವು ಸಮಾಜ ಘಾತುಕ ಶಕ್ತಿಗಳು ಇಂಥ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ಕೋಮುಗಲಭೆ ಸೃಷ್ಟಿಸಲು ಹವಣಿಸುತ್ತವೆ. ಇಂಥವರ ಬಗ್ಗೆಯೂ ಎಚ್ಚರವಹಿಸಬೇಕೆಂದು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ.

ಬಿಗಿಭದ್ರತೆ: ಇನ್ನು ಗಣೇಶ ಹಬ್ಬದ ಉತ್ಸವದ ವೇಳೆ ಚಾಮರಾಜಪೇಟೆ ಮೈದಾನದಲ್ಲಿ ಕಾರ್ಯಕ್ರಮ ಮುಗಿಯುವವರೆಗೂ ಸೂಕ್ತ ಭದ್ರತೆಯನ್ನು ಒದಗಿಸಬೇಕು. ದಿನ 24 ಗಂಟೆಯೂ ಕೆಎಸ್‍ಆರ್‍ಪಿ, ಸಿಎಆರ್, ಸಿಸಿಟಿವಿ ಅಳವಡಿಕೆ ಸೇರಿದಂತೆ ಹತ್ತು ಹಲವು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ಕೊಡಲಾಗಿದೆ.

ಯಾವುದೇ ರೀತಿಯ ಸಣ್ಣ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಹಿರಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಭದ್ರತೆಗೆ ನಿಯೋಜನೆ ಮಾಡಬೇಕೆಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಮೂರು ದಿನಗಳ ನಂತರ ಗಣಪತಿ ವಿಸರ್ಜನೆಯನ್ನು ಹಗಲಿನಲ್ಲೇ ಮಾಡಬೇಕು. ಪಾಲಿಕೆ ಮತ್ತು ಕಂದಾಯ ಇಲಾಖೆ ಅಕಾರಿಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ಕೊಡಲಾಗಿದೆ.

Articles You Might Like

Share This Article