ಬೆಂಗಳೂರು,ಆ.17- ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಸಂದ ಬಳಿಕ ಧ್ವಜಾರೋಹಣ ನೆರವೇರಿದ ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ವಿಘ್ನ ಎದುರಾಗಿದೆ. ಸೂಕ್ಷ್ಮ ಪ್ರದೇಶವಾಗಿರುವ ಚಾಮರಾಜಪೇಟೆ ಮೈದಾನದಲ್ಲಿ ಯಾವುದೆ ಕಾರಣಕ್ಕೂ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಬಾರದು ಎಂದು ಪೊಲೀಸರು ಬಿಬಿಎಂಪಿ ಮತ್ತು ಕಂದಾಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.
ಒಂದು ವೇಳೆ ಗಣೇಶ ಉತ್ಸವಕ್ಕೆ ಅವಕಾಶ ನೀಡಿದರೆ ಕೋಮು ಸಾಮರಸ್ಯ ಹಾಳಾಗುವ ಸಾಧ್ಯತೆಗಳಿರುವುದರಿಂದ ಯಾವುದೇ ಕಾರಣಕ್ಕೂ ಗಣೇಶೋತ್ಸವಕ್ಕೆ ಅವಕಾಶ ನೀಡಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಬಾರದು, ಒಂದು ವೇಳೆ ಒಂದು ಸಂಘಟನೆಗೆ ಅವಕಾಶ ನೀಡಿದರೆ ಇನ್ನಿತರ ಹಲವಾರು ಸಂಘಟನೆಗಳು ಬೇಡಿಕೆ ಸಲ್ಲಿಸುವ ಸಾಧ್ಯತೆಗಳಿವೆ. ಹಲವಾರು ಸಂಘಟನೆಗಳು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರೆ ಪೊಲೀಸ್ ಬಂದೋಬಸ್ತ್ ನೀಡಲು ಸಾಧ್ಯವಾಗುವುದಿಲ್ಲ. ಉತ್ಸವ ನಡೆಯುವ ಮೂರ್ನಾಲ್ಕು ದಿನಗಳ ಕಾಲ ಪೊಲೀಸ್ ನಿಯೋಜನೆ ಅಸಾಧ್ಯ, ಇದರ ಜೊತೆಗೆ ಗಣೇಶ ಮೂರ್ತಿ ಮೆರವಣಿಗೆ ವೇಳೆ ಗಲಾಟೆ ನಡೆದು ಎರಡು ಕೋಮುಗಳ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು.
ಕಿಡಿಗೇಡಿಗಳು ಇಂತಹ ಸಂದರ್ಭವನ್ನ ದುರ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ರಾಷ್ಟ್ರೀಯ ಹಬ್ಬಗಳನ್ನು ಹೊರತುಪಡಿಸಿ ಇತರ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಬಾರದು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ನಿರಾಸೆ: ಈದ್ಗಾ ಮೈದಾನದ ಮೇಲೆ ರಾಷ್ಟ್ರ ಧ್ವಜ ಹಾರಾಡಿದ ನಂತರ ನಾವು ಅದೇ ಮೈದಾನದಲ್ಲಿ ಗಣೇಶೋತ್ಸವ ಆಚರಿಸುತ್ತೇವೆ ಎಂದು ಕೆಲವು ಸ್ಥಳೀಯ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿದ್ದವು. ಮೈದಾನ ಇದೀಗ ಕಂದಾಯ ಇಲಾಖೆ ಸುಪರ್ದಿಗೆ ಒಳಪಟ್ಟಿರುವುದರಿಂದ ಬಿಬಿಎಂಪಿ ಇಲ್ಲವೇ ಕಂದಾಯ ಇಲಾಖೆ ಅನುಮತಿ ಪಡೆದು ಉತ್ಸವ ಆಚರಣೆ ಮಾಡಿಕೊಳ್ಳಬಹುದು ಎಂದು ಸೂಚಿಸಲಾಗಿತ್ತು.
ಇದೀಗ ಪೊಲೀಸರು ಯಾವುದೇ ಕಾರಣಕ್ಕೂ ಗಣೇಶೋತ್ಸವ ಮತ್ತಿತರ ಧಾರ್ಮಿಕ ಆಚರಣೆಗಳಿಗೆ ಅನುಮತಿ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿರುವುದರಿಂದ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಮುಂದಾಗಿದ್ದ ಕೆಲ ಸಂಘಟನೆಗಳಿಗೆ ನಿರಾಸೆಯಾಗಿದೆ.
ಕಠಿಣ ಶಿಕ್ಷೆ: ಒಂದು ವೇಳೆ ಅನುಮತಿ ಪಡೆಯದೆ ಮೈದಾನದಲ್ಲಿ ಯಾರಾದರೂ ಉತ್ಸವ ಆಚರಿಸಲು ಮುಂದಾದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಹಿಂದು ಮುಂದು ನೋಡುವುದಿಲ್ಲ ಎಂದು ಉನ್ನತ ಮೂಲಗಳು ಈ ಸಂಜೆಗೆ ಖಚಿತಪಡಿಸಿವೆ.