ಚಾಮುಂಡೇಶ್ವರಿಗೆ ಹೊಸ ವರ್ಷದ ಮೊದಲ ದಿನ ವಿಶೇಷ ಪೂಜೆ

ಮೈಸೂರು, ಜ.1-ನೂತನ ವರ್ಷದ ಮೊದಲ ದಿನವಾದ ಇಂದು ನಗರ ಸೇರಿದಂತೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಗಳು ನೆರವೇರಿದವು. ಇಂದು ಬೆಳಗಿನ ಜಾವದಿಂದಲೇ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.

ನಗರದ ಗಣಪತಿ ಆಶ್ರಮ, ಒಂಟಿಕೊಪ್ಪಲಿನ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಜಗನ್ಮೋಹನ ಅರಮನೆ ಬಳಿ ಇರುವ ನರಸಿಂಹಸ್ವಾಮಿ ದೇವಾಲಯ, ಕೋಟೆ ಗಣಪತಿ ಮತ್ತು ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ನಗರದ ವಿವಿಧ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಮಂದಿ ಭಕ್ತಾದಿಗಳು ಮೆಟ್ಟಿಲು ಹತ್ತಿ ದೇವಿ ದರ್ಶನ ಪಡೆದರೆ, ಮತ್ತೆ ಕೆಲವರು ವಾಹನಗಳ ಮೂಲಕ ಬೆಟ್ಟಕ್ಕೆ ತೆರಳಿದ್ದಾರೆ.

ದೇವಿಯ ದರ್ಶನ ಪಡೆಯಲು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಹೆಚ್ಚಿನ ವಾಹನಗಳ ದಟ್ಟಣೆಯಿಂದ ಸಂಚಾರ ಅಸ್ತವ್ಯಸ್ತಗೊಂಡು ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ದೇವರ ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಸಹ ಮಾಡಲಾಗಿತ್ತು.

ಒಂಭತ್ತು ಮಕ್ಕಳ ಜನನ: ನೂತನ ವರ್ಷದ ಆರಂಭದಲ್ಲಿ ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ಒಟ್ಟು ಒಂಭತ್ತು ಮಕ್ಕಳು ಜನಿಸಿರುವುದು ವಿಶೇಷ. 2020ರ ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ 6 ಗಂಡು ಹಾಗೂ 3 ಹೆಣ್ಣು ಶಿಶುಗಳು ಜನಿಸಿದ್ದು, ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.