ಚಾಮುಂಡಿ ಬೆಟ್ಟದಲ್ಲಿ ವಿಜೃಂಭಣೆಯ ಮಹಾರಥೋತ್ಸವ
ಮೈಸೂರು, ಅ.13-ನಾಡದೇವತೆ ಚಾಮುಂಡೇಶ್ವರಿಯ ಮಹಾರಥೋತ್ಸವ ಇಂದು ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ 6.30 ರಿಂದ 7.15ರ ಒಳಗಿನ ಶುಭ ತುಲಾ ಲಗ್ನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಪ್ರದಾಯದಂತೆ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರಥದ ಹಗ್ಗ ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಮಹಾರಥೋತ್ಸವ ಹಿನ್ನೆಲೆಯಲ್ಲಿ ದೇವಿಗೆ ಇಂದು ಮುಂಜಾನೆ 4 ಗಂಟೆಗೆ ದೇವಿಕೆರೆಯಿಂದ ಜಲವನ್ನು ತಂದು ಅಭಿಷೇಕ ನೆರವೇರಿಸಿ ನಂತರ, ಪಂಚಾಮೃತ, ರುದ್ರಾಭಿಷೇಕ ಮಾಡಲಾಯಿತು. ಚಾಮುಂಡೇಶ್ವರಿ ದೇವಿಗೆ ರೇಷ್ಮೆ ಸೀರೆ ಉಡಿಸಿ, ವಿವಿಧ ಹೂವುಗಳಿಂದ ಅಲಂಕರಿಸಿ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಇದೇ ವೇಳೆ ಮಹಾರಾಜ ಯದುವೀರರು ಮಾತನಾಡಿ, ದಸರಾ ಮಹೋತ್ಸವವು ಈಗಷ್ಟೇ ಮುಗಿದಿದೆ. ಸಂಪ್ರದಾಯದಂತೆ ಇಂದು ಚಾಮುಂ ಡೇಶ್ವರಿ ರಥೋತ್ಸವ ನಡೆದಿದ್ದು, ದೇವಿಗೆ ಪೂಜೆ ಸಲ್ಲಿಸಲಾಗಿದೆ ಎಂದರು. ರಾಜ್ಯಕ್ಕೆ ಉತ್ತಮ ಮಳೆ, ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ಅ.15ರಂದು ಸಂಜೆ ದೇವಿ ಕೆರೆಯಲ್ಲಿ ತೆಪ್ಪೋತ್ಸವ ಜರುಗಲಿದೆ. ರಥೋತ್ಸವದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್, ಮಹಾರಾಣಿ ತ್ರಿಷಿಕಾ, ಶಾಸಕ ಜಿ.ಟಿ.ದೇವೇಗೌಡ ಮತ್ತಿತರರು ಉಪಸ್ಥಿತರಿದ್ದರು.