ಬೆಂಗಳೂರು,ಫೆ.12-ರಾಜ್ಯದ ಹಲವು ಭಾಗಗಳಲ್ಲಿ ವಿವಾದ ಸೃಷ್ಟಿಸಿರುವ ಹಿಜಾಬ್ ಇದೀಗ ನಗರದ ಶಾಲೆಯೊಂದಕ್ಕೂ ಲಗ್ಗೆಯಿಟ್ಟಿದ್ದು, ಇಂದು ಬೆಳಗ್ಗೆ ಶಾಲೆ ಮುಂಭಾಗ ಪೋಷಕರು ಜಮಾವಣೆಗೊಂಡು ಶಿಕ್ಷಕರು ಮತ್ತು ಶಾಲಾಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಂದ್ರಾಲೇಔಟ್‍ನಲ್ಲಿರುವ ವಿದ್ಯಾಸಾಗರ್ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯರಿಗೆ ನಿನ್ನೆ ಹಿಜಾಬ್ ಧರಿಸಿ ಬರಬೇಡಿ ಎಂದು ಶಿಕ್ಷಕರು ಹೇಳಿದ್ದಾರೆ.
ಶಿಕ್ಷಕಿಯೊಬ್ಬರು ತರಗತಿಯ ಬೋರ್ಡ್ ಮೇಲೆ ಕೆಎಲ್‍ಎಸ್ ಎಂದು ಬರೆದಿರುವುದನ್ನು ವಿದ್ಯಾರ್ಥಿನಿಯರು ಪೋಷಕರಿಗೆ ತಿಳಿಸಿದ್ದಾರೆ.
ಈ ವಿಷಯ ಕಾಡ್ಗಿಚ್ಚಿನಂತೆ ಹರಡಿದ್ದು, ಕೆಲ ಪೋಷಕರು ತರಗತಿಗಳಿಗೂ ನುಗ್ಗಿ ಶಿಕ್ಷಕರೊಂದಿಗೆ ವಾಗ್ವಾದ ನಡೆಸಿದರಲ್ಲದೆ, ಬೋರ್ಡ್ ಮೇಲೆ ಬರೆದ ಶಿಕ್ಷಕಿಯನ್ನು ಅಮಾನತುಗೊಳಿಸಬೇಕೆಂದು ಪಟ್ಟು ಹಿಡಿದರು.
ಶಾಲೆಯ ಬಳಿ ಒಂದು ರೀತಿ ಉದ್ವಿಗ್ನ ವಾತಾವರಣವೇ ಸೃಷ್ಟಿಯಾಗಿತ್ತು. ಸುದ್ದಿ ತಿಳಿದು ಚಂದ್ರಾಲೇಔಟ್ ಠಾಣೆ ಪೋಲೀಸರು ಶಾಲೆ ಬಳಿ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿ ಪೋಷಕರನ್ನು ಸಮಾದಾನ ಪಡಿಸಲು ಹರಸಾಹಸಪಟ್ಟರು.
# ಡಿಡಿಪಿಐ ಭೇಟಿ:
ವಿದ್ಯಾಸಾಗರ ಶಾಲೆಯಲ್ಲಿ ಗೊಂದಲವುಂಟಾಗಿದೆ ಎಂಬ ವಿಷಯ ತಿಳಿದು ಬೆಂಗಳೂರು ದಕ್ಷಿಣ ವಿಭಾಗದ ಉಪನಿರ್ದೇಶಕರಾದ ಬೈಲಾಂಜನಪ್ಪ ಅವರು ಭೇಟಿ ನೀಡಿ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಬೋರ್ಡ್‍ನಲ್ಲಿ ಬರೆದಿರುವ ಶಿಕ್ಷಕಿಯೊಂದಿಗೂ ಸಹ ಡಿಡಿಪಿಐ ಚರ್ಚೆ ನಡೆಸಿದ್ದಾರೆ. ಶಾಲೆಯ ಶಿಕ್ಷಕಿಯೊಬ್ಬರು ಕೆಎಲ್‍ಎಸ್ ಎಂದು ಬೋರ್ಡ್ ಮೇಲೆ ಬರೆದಿರುವ ಬರಹವನ್ನು ವಿದ್ಯಾರ್ಥಿನಿಯರು ತಪ್ಪಾಗಿ ಅರ್ಥೈಹಿಸಿದ್ದಾರೆ.
ಪಾಠದ ವಿಚಾರವಾಗಿ ಬರೆದಿದ್ದೇನೆ ಎಂದು ಶಿಕ್ಷಕಿ ನನಗೆ ತಿಳಿಸಿದ್ದಾರೆ. ನಾನು ಆ ಶಿಕ್ಷಕಿಯೊಂದಿಗೂ ಚರ್ಚೆ ನಡೆಸಿದ್ದೇನೆ ಎಂದರು. ಹಿಜಾಬ್ ಬಗ್ಗೆ ಬೋರ್ಡ್ ಮೇಲೆ ಏನೂ ಬರೆದಿಲ್ಲವೆಂದು ನನಗೆ ಶಿಕ್ಷಕಿ ತಿಳಿಸಿದ್ದಾರೆ ಎಂದು ಡಿಡಿಪಿಐ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸ್ಪಷ್ಟಪಡಿಸಿದರು.
# ವಿವಾದ ದೊಡ್ಡದು ಮಾಡಬೇಡಿ:
ಈ ವಿವಾದವನ್ನು ದೊಡ್ಡದು ಮಾಡಬಾರದು. ಈ ವಿಚಾರವಾಗಿ ವಿದ್ಯಾರ್ಥಿನಿಯರಿಗೆ ತಿಳಿ ಹೇಳಬೇಕು ಎಂದು ಸ್ಥಳೀಯ ನಿವಾಸಿ ಶಾಬುದ್ದೀನ್ ಎಂಬುವವರು ಸಲಹೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಶಾಂತ ರೀತಿಯಿಂದ ವರ್ತಿಸಬೇಕು. ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.
ಭದ್ರತೆ: ಶಾಲೆ ಬಳಿ ಬಿಗಿ ಭದ್ರತೆಗಾಗಿ ಪೋಲೀಸರನ್ನು ನಿಯೋಜಿಸಲಾಗಿದೆ.
