ಬೆಂಗಳೂರು, ಫೆ.16- ಹಿರಿಯ ಸಾಹಿತಿ ಚನ್ನವೀರ ಕಣವಿ ಮತ್ತು ಮಾಜಿ ಶಾಸಕ ಡಾ.ಹೆಚ್.ಡಿ.ಚೌಡಯ್ಯ ಅವರ ನಿಧನಕ್ಕೆ ವಿಧಾನ ಪರಿಷತ್ ನಲ್ಲಿಂದು ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಬೋಜನ ವಿರಾಮದ ಬಳಿಕ ಸದನ ಸಮಾವೇಶಗೊಂಡಾಗ ಸಭಾಪತಿ ಬಸವರಾಜ ಹೊರಟ್ಟಿ ಅವರು, ಇಬ್ಬರು ಗಣ್ಯರ ಅಗಲುವಿಕೆಯನ್ನು ಸದನದ ಗಮನಕ್ಕೆ ತಂದರು.
ಚೌಡಯ್ಯ ಅವರು 1928ರಂದು ಮಂಡ್ಯದಲ್ಲಿ ಜನಿಸಿದ ಚೌಡಯ್ಯ ಅವರು ಬಿಸ್ಸಿ ಪದವೀಧರರಾಗಿದ್ದರು. ರೈತಾಪಿ ಕುಟುಂಬದಿಂದ ಬಂದ ಅವರು ತಾಲ್ಲೂಕು ಬೋರ್ಡ್ ಸದಸ್ಯರಾಗಿ, ಅಧ್ಯಕ್ಷರಾಗಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಕಾವೇರಿ ಹೋರಾಟದ ಮುಂಚೂಣಿಯಲ್ಲಿದ್ದರು. ಶಿಕ್ಷಣ ಸಂಸ್ಥೆ ಸ್ಥಾಪಿಸಿ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿ, ನಾಲ್ಕು ಬಾರಿ ಕೆರೆಗೋಡು ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿ, ವಿಧಾನ ಸಭೆಯಲ್ಲಿ ಹಂಗಾಮಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಚನ್ನವೀರ ಕಣವಿ ಅವರು 1928ರಂದು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಜನಿಸಿದ್ದರು. ಎಂ ಎ ಪದವೀಧರರಾದ ಅವರು ಕರ್ನಾಟಕ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿ, ನಿರ್ದೇಶಕರಾಗಿ, ಸೇವೆ ಸಲ್ಲಿಸಿದ್ದಾರೆ. ಹೊಸಗನ್ನಡ ಕಾವ್ಯ ಪರಂಪರೆಯ ಹಿರಿಯ ತಲೆಮಾರಿನ ಕವಿಯೆಂದೆ ಹೆಸರು ವಾಸಿಯಾಗಿದ್ದರು.
ಅವರ ಕಾವ್ಯದಲ್ಲಿ ರಮ್ಯ ಮನೋಧರ್ಮ, ಆದರ್ಶ ಪ್ರಿಯತೆ, ವ್ಯಕ್ತಿತ್ವ ನಿರ್ಮಾಣ ಹಂಬಲಗಳು ವಿಶೇಷವಾಗಿ ಕಂಡು ಬರುತ್ತವೆ. ವಿಶ್ವಭಾರತಿಗೆ ಕನ್ನಡದಾರತಿ ಮೊದಲಾದ ಜನಪ್ರಿಯ ಗೀತೆಗಳನ್ನು ರಚಿಸಿದ್ದಾರೆ. 36ಕ್ಕೂ ಹೆಚ್ಚು ಗ್ರಂಥಗಳು, 16 ಕವನ ಸಂಕಲನ, 5 ವಿಮರ್ಶಾ ಗ್ರಂಥಗಳು, ಪ್ರಬಂಧ ಸಂಕಲನ, ಮಕ್ಕಳ ಬರಹಗಳು ಸೇರಿದಂತೆ ಅನೇಕ ಅಮೂಲ್ಯ ಗ್ರಂಥಗಳನ್ನು ರಚಿಸಿದ್ದಾರೆ.
ಹಾಸನದಲ್ಲಿ ನಡೆದ 65ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, 2008ರ ಆಳ್ವಾಸ್ ನುಡಿಸಿರಿ ಸಮ್ಮೇಳನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕವಿರತ್ನ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ ಎಂದರು.
ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿ, ಮೃತರ ಗುಣಗಾನ ಮಾಡಿದರು. ನಂತರ ಮೌನಾಚರಣೆಯ ಮೂಲಕ ಸದನ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿತ್ತು.
