ಚಾರ್ಮಾಡಿ ಘಾಟ್ ನಲ್ಲಿ ಪುಂಡರ ಮೋಜು ಮಸ್ತಿ, ಸಂಚಾರಕ್ಕೆ ಅಡಚಣೆ

ಬಣಕಲ್, ಜು.19- ಕಳೆದ ಎರಡು ದಿನಗಳಿಂದ ಕೊಟ್ಟಿಗೆಹಾರ, ಬಣಕಲ್, ಬಾಳೂರು, ನಿಡುವಾಳೆ, ಕೂವೆ, ಚಕ್ಕಮಕ್ಕಿ, ಬಗ್ಗಸಗೋಡು, ಚಕ್ಕೋಡು ಸುತ್ತಮುತ್ತ ಮಳೆಯಾಗುತ್ತಿದ್ದು, ಒಟ್ಟಾರೆ ಕೊಟ್ಟಿಗೆಹಾರದಲ್ಲಿ 31.8 ಮಿ.ಮೀ ಮಳೆಯಾಗಿದೆ. ದಿನವಿಡಿ ಸುರಿಯುತ್ತಿರುವ ಮಳೆಯಿಂದ ಮಲೆನಾಡಿನಲ್ಲಿ ಚಳಿ ವಾತಾವರಣ ನಿರ್ಮಾಣವಾಗಿದ್ದು, ಸುತ್ತಮುತ್ತ ದಟ್ಟವಾದ ಮಂಜು ಕವಿದಿದೆ.

ಕೃಷಿ ಚಟುವಟಿಕೆಗಳು ಗರಿಗೆದರಿದ್ದು ಕಳೆದ ಕೆಲವು ದಿನಗಳಿಂದ ಮಳೆ ಮಾಯವಾಗಿತ್ತು. ಆದರೆ ಈಗ ಸುರಿಯುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಚಾರ್ಮಾಡಿ ಘಾಟಿಯಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಜಲಪಾತಗಳು ನೀರು ತುಂಬಿ ಬೋರ್ಗರೆಯುತ್ತಿರುವುದರಿಂದ ಮಂಜು ಕವಿದ ತಂಪಿನ ತಾಣದಲ್ಲಿ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗಿದ್ದು ರಸ್ತೆಯಲ್ಲಿಯೇ ನೃತ್ಯ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಕೋವಿಡ್ ಹಿನ್ನಲೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ಜನಜಂಗುಳಿಯೇ ಜಾಸ್ತಿಯಾಗಿದ್ದು ಪ್ರವಾಸಿಗರು ಅಂತರ ಕಾಪಾಡದೇ ಸೋಂಕು ಹರಡುವ ಸಾಧ್ಯತೆಗಳೇ ಹೆಚ್ಚಾಗಿವೆ. ರಸ್ತೆಯಲ್ಲಿಯೇ ನೃತ್ಯ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಅಪಾಯದ ಸ್ಥಳಗಳಲ್ಲಿ ಪ್ರವಾಸಿಗರು, ಯುವಕ ಯುವತಿಯರು ಸೆಲ್ಫಿ ತೆಗೆಯುತ್ತಿದ್ದು ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪ್ರವಾಸಿಗರಿಗೆ ಮೋಜು ಮಸ್ತಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರವಾಸಿಗರು ಬೇರೆಯವರಿಗೆ ತೊಂದರೆಯಾಗದಂತೆ ತಮ್ಮ ಪ್ರವಾಸವನ್ನು ಸಂಭ್ರಮಿಸಬೇಕು. ಕುಡಿದು ರಸ್ತೆಯಲ್ಲೇ ನೃತ್ಯ ಮಾಡುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳೇ ಹೆಚ್ಚಾಗಿವೆ. ಸಂಬಂಧಿಸಿದ ಅಧಿಕಾರಿಗಳು ಈ ಸ್ಥಳದಲ್ಲಿ ಮೋಜು ಮಸ್ತಿಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರಾದ ಪ್ರದೀಪ್‍ರಾಜ್ ಮನವಿ ಮಾಡಿದ್ದಾರೆ.