ಚೆನ್ನೈ ಫೆ. 10- ದ್ವಿಚಕ್ರ ವಾಹನಗಳಲ್ಲಿ ಬಂದ ದುಷ್ಕರ್ಮಿಗಳು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಚೆನ್ನೈನಲ್ಲಿರುವ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ನಂದನಂ ನಿವಾಸಿ ರೌಡಿ ಶೀಟರ್ ವಿನೋದ್ ಎಂಬಾತನನ್ನು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಆರೋಪಿ ಅಪರಾಧ ಹಿನ್ನಲೆಯ ಅಸಾಮಿಯಾಗಿದ್ದು ಹಣ ಪಡೆದು ಪೆಟ್ರೋಲ್ ಬಾಂಬ್ ಎಸೆಯುವುದರಲ್ಲಿ ಹೆಸರುವಾಸಿಯಾಗಿದ್ದಾನೆ. ನೀಟ್ ಮಸೂದೆಯನ್ನು ಬಿಜೆಪಿ ಬೆಂಬಲಿಸಿದ್ದಕ್ಕೆ ಬೇಸರಗೊಂಡು ಪೆಟ್ರೋಲ್ ಬಾಂಬ್ ಎಸೆದಿರುವುದಾಗಿ ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ.
ವಿನೋತ್ ವಿರುದ್ಧ ಹಲವು ಪ್ರಕರಣಗಳು ಬಾಕಿ ಇರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಈತ 2015ರಲ್ಲಿ ಸರ್ಕಾರಿ ಸ್ವಾಮ್ಯದ ಮದ್ಯದಂಗಡಿ ಮೇಲೆ ಮತ್ತು 2017ರಲ್ಲಿ ತೇನಾಂಪೇಟೆ ಪೊಲೀಸ್ ಠಾಣೆ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದ.ನಾಲ್ಕು ಕೊಲೆ ಯತ್ನ ಪ್ರಕರಣಗಳು ಸೇರಿದಂತೆ ಹತ್ತು ಪ್ರಕರಣಗಳು ದಾಖಲಾಗಿವೆ.
ಆರೋಪಿ ಮದ್ಯ ಸೇವಿಸಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಬಳಿಕ ಪೊಲೀಸರ ದಾರಿ ತಪ್ಪಿಸಿ ಪರಾರಿಯಾಗಿದ್ದ ನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ,
