ಚಿಕ್ಕಬಳ್ಳಾಪುರ, ಜ.22- ತಾಲ್ಲೂಕಿನ ಹಲವೆಡೆ ಭೂಕಂಪನದ ಅನುಭವವಾಗಿದೆ. ಶೆಟ್ಟಿಗೆರೆ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮತ್ತೆ ಭೂಮಿ ಕಂಪಿಸಿದೆ. ಪರಿಣಾಮ ಗ್ರಾಮಸ್ಥರು ಮನೆಗಳನ್ನು ತೊರೆದು ಬಯಲು ಪ್ರದೇಶದಲ್ಲಿ ಕಾಲ ಕಳೆದಿದ್ದಾರೆ.
ಇಂದು ಬೆಳಗ್ಗೆ ಭಾರೀ ಸದ್ದಿನೊಂದಿಗೆ ಹಲವಾರು ಬಾರಿ ಭೂಮಿ ಕಂಪಿಸಿದ್ದು, ಜನ ಭಯಭೀತರಾಗಿದ್ದಾರೆ. ಇದೇ ಪ್ರದೇಶದಲ್ಲಿ ಕಳೆದ ಡಿಸೆಂಬರ್ ಮತ್ತು ಜನವರಿ ಮೊದಲ ವಾರದಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿದ್ದು, ಆತಂಕಕ್ಕೊಳಗಾಗಿದ್ದ ಜನ ಮನೆಯಿಂದ ಹೊರಗೋಡಿ ಬಂದಿದ್ದರು.
ಕಂಪನದಿಂದ ಹಲವು ಮನೆಗಳು ಬಿರುಕುಬಿಟ್ಟಿದ್ದವು. ಈಗ ಮತ್ತೆ ಭೂಮಿ ಕಂಪಿಸಿದೆ. ಪದೇ ಪದೇ ಭೂಕಂಪನವಾಗುತ್ತಿರುವುದಕ್ಕೆ ಭಯಭೀತರಾಗಿರುವ ಜನ ಮನೆಗಳನ್ನು ತೊರೆದು ದೂರದೂರದ ಸ್ಥಳಗಳಿಗೆ ತೆರಳುತ್ತಿದ್ದಾರೆ. ಭೂಕಂಪನವಾಗುತ್ತಿರುವುದು ಮತ್ತು ಭೂಮಿಯಿಂದ ಭಾರೀ ಪ್ರಮಾಣದ ಶಬ್ದ ಬರುತ್ತಿರುವ ಸ್ಥಳಗಳಿಗೆ ಭೂ ವಿಜ್ಞಾನಿಗಳ ತಂಡ ತೆರಳಿ ಪರಿಶೀಲನೆ ನಡೆಸಿದೆ.
ಸಚಿವ ಸುಧಾಕರ್ ಅವರು ಕೂಡ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದಿದ್ದಾರೆ. ತಿಂಗಳ ಹಿಂದೆ ಅಕ ಮಳೆಯಿಂದ ಭೂಮಿಯಲ್ಲಿ ಸೃಷ್ಟಿಯಾಗಿರುವ ಶಬ್ದದಿಂದ ಭೂಮಿ ಕಂಪಿಸುತ್ತಿದೆ ಎಂದು ಹೇಳಲಾಗಿದೆ. ನಿಖರ ಮಾಹಿತಿ ಸ್ಪಷ್ಟವಾಗಿಲ್ಲ. ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.
