ಇಂಗ್ಲೀಷ್ ಬಾರದ ಮಲೆನಾಡ ರೈತರ ಗೋಳು ಕೇಳೋರು ಯಾರು ..?

Social Share

ಚಿಕ್ಕಮಗಳೂರು,ಆ.21-ಸ್ವಾಮಿ ನಮಗೆ ಇಂಗ್ಲೀಷ್ ಬಂದಿದ್ದರೆ ನಾವೇಕೆ ವ್ಯವಸಾಯ ಮಾಡಬೇಕಿತ್ತು. ಯಾವುದಾದರೂ ಆಫೀಸ್‍ನಲ್ಲಿ ಏಸಿ ರೂಮ್‍ನಲ್ಲಿ ಕುಳಿತುಕೊಂಡು ಕೆಲಸ ಮಾಡುತ್ತಿದ್ದೆವು ಎಂದು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸುತ್ತಿರುವ ಕಾಫಿನಾಡಿನ ಅನ್ನದಾತರ ನೋವಿನ ಮಾತು.

ಕಳೆದ ತಿಂಗಳು ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಕೈಗೆ ಬಂದ ಬೆಳೆ ನಾಶವಾಗಿದ್ದು, ಸರ್ಕಾರ ಬೆಳೆ ಪರಿಹಾರಕ್ಕೆ ಅರ್ಜಿ ಆಹ್ವಾನಿಸಿದೆ. ಆದರೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಂಗ್ಲಭಾಷೆಯ ಅರ್ಜಿಗಳನ್ನು
ನೀಡಿದ್ದಾರೆ. ಪರಿಹಾರ ಸಿಕ್ಕರೆ ಸಾಕು ಎನ್ನುವ ರೈತರು ಅದೇ ಅರ್ಜಿ ಪಡೆದು ಭರ್ತಿ ಮಾಡಲು ವಿದ್ಯಾವಂತರ ಮನೆ ಬಾಗಿಲು ತಟ್ಟುತ್ತಿದ್ದಾರೆ.

ಇದನ್ನೇ ಬಂಡವಾಳ ಮಾಡಿಕೊಂಡ ವಿದ್ಯಾವಂತರು ಒಂದು ಅರ್ಜಿ ಭರ್ತಿ ಮಾಡಲು 50 ರೂ.ನಿಂದ 500 ರೂ.ವರೆಗೂ ಹಣ ಪಡೆಯುತ್ತಿದ್ದಾರೆ. ಅಲ್ಲದೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನವಾಗಿದ್ದು, ಅನಿವಾರ್ಯವಾಗಿ ಬೇಸತ್ತ ಕೆಲ ರೈತರು ಗೊಂದಲದಿಂದ ಇನ್ನು ಅರ್ಜಿ ಸಲ್ಲಿಸದೆ ಪರದಾಡುತ್ತಿದ್ದಾರೆ.

ಆಂಗ್ಲ ಭಾಷೆಯ ಅರ್ಜಿ ಕೊಟ್ಟಿದ್ದೀರಲಾ ಕನ್ನಡದಲ್ಲಿ ಅರ್ಜಿ ಕೊಡಿ ಎಂದು ರೈತರು ಅಕಾರಿಗಳನ್ನು ಕೇಳಿದರೆ ಬೆಳೆ ಪರಿಹಾರ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಅದಕ್ಕಾಗಿ ಇಂಗ್ಲೀಷ್‍ನಲ್ಲಿ ಅರ್ಜಿ ಕಳಿಸಿದ್ದಾರೆ ಎಂದು ಕುಂಟು ನೆಪ ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ರೈತರ ಗೋಳು ಯಾರೂ ಕೇಳುವವರಿಲ್ಲದಂತಾಗಿದೆ.

ಹೇಗೋ ಒಂದಿಷ್ಟು ಪರಿಹಾರ ದೊರಕಿದರೆ ಸಾಕು ಎಂದು ಅನಿವಾರ್ಯವಾಗಿ ಆಂಗ್ಲ ಭಾಷೆಯ ಅರ್ಜಿಗಳನ್ನು ತುಂಬಿಸಿಕೊಂಡು ಸಲ್ಲಿಸುತ್ತಿದ್ದಾರೆ.

Articles You Might Like

Share This Article