ಬೆಂಗಳೂರು,ಜ.4- ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ರಾಜ್ಯದಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನಿಷ್ಟ ಪದ್ಧತಿ ತಡೆಗೆ ಹೊಸ ಪ್ಲಾನ್ ರೂಪಿಸಿದೆ.
ಜನ ಎಷ್ಟೆ ಬುದ್ದಿವಂತರಾದರೂ ತಮ್ಮ ಅನಿಷ್ಟ ಪದ್ದತಿಗಳನ್ನು ಬಿಡುತ್ತಿಲ್ಲ ಎನ್ನುವುದಕ್ಕೆ ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹಗಳ ಸಂಖ್ಯೆಗಳೆ ಸಾಕ್ಷಿಯಾಗಿದೆ. ಕೊರೊನಾ ಸಂದರ್ಭದಲ್ಲಿ ಶಾಲೆಗಳಿಗೂ ರಜೆ ಘೋಷಿಸಲಾಗಿದ್ದ ಕಾರಣ ಮದುವೆ ಖರ್ಚು ಉಳಿಸಬಹುದು ಎಂಬ ಲೆಕ್ಕಚಾರದಲ್ಲಿ ಲಾಕ್ಡೌನ್ನಲ್ಲಿ ಸಾವಿರಾರು ಬಾಲ್ಯ ವಿವಾಹಗಳು ನಡೆದು ಹೋಗಿದ್ದವು.
ಇಂತಹ ಅನಿಷ್ಟ ಪದ್ಧತಿಯನ್ನು ತೊಡೆದು ಹಾಕಲು ಕಂಕಣ ತೊಟ್ಟಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪ್ರಸಕ್ತ ವರ್ಷದಿಂದ ಬಾಲ್ಯ ವಿವಾಹ ತಡೆಗೆ ನೂತನ ಕ್ರಮ ಜಾರಿ ಮಾಡಲು ತೀರ್ಮಾನಿಸಿದೆ. ಇನ್ಮುಂದೆ ಮದುವೆಯಾಗಲು ಇಚ್ಚಿಸುವವರು ಈ ವರ್ಷದಿಂದ ಕಡ್ಡಾಯವಾಗಿ ವಿವಾಹ ನೋಂದಣಿ ಮಾಡಿಸುವ ಮೂಲಕ ಬಾಲ್ಯ ವಿವಾಹ ಪ್ರಕರಣಗಳಿಗೆ ಕಡಿವಾಣ ಹಾಕಲಾಗಲು ನಿರ್ಧರಿಸಲಾಗಿದೆ.
ಬೆಂಗಳೂರಲ್ಲಿ ಕ್ರೈಂ ರೇಟ್ ಹೇಗಿದೆ..? ಕಮಿಷನರ್ ಪ್ರತಾಪ್ ರೆಡ್ಡಿ ಹೇಳೋದೇನು..?
ಬಾಲ್ಯ ವಿವಾಹಗಳ ವಿವರ: ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 8,998 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಬಾಲ್ಯ ವಿವಾಹ ಮಾಡಲು ಮುಂದಾಗಿದ್ದ 1,303 ಜನರ ವಿರುದ್ಧ ದೂರು ದಾಖಲು ಮಾಡಲಾಗಿದ್ದು ಇವುಗಳ ಪೈಕಿ 8 ಜನರಿಗೆ ಶಿಕ್ಷೆಯಾಗಿದೆ.
ಬಾಲ್ಯ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಾಲ್ಯವಿವಾಹಕ್ಕೆ ಒಳಪಟ್ಟ 278 ಮಕ್ಕಳನ್ನು ರಕ್ಷಣೆ ಮಾಡಿ ಮರಳಿ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.
2018-19ರಲ್ಲಿ ಇದ್ದ ಬಾಲ್ಯ ವಿವಾಹಗಳ ಸಂಖ್ಯೆ 119 ಹಾಗೂ 2019-20ರಲ್ಲಿ 140ರಷ್ಟಿದ್ದ ಬಾಲ್ಯ ವಿವಾಹಗಳ ಸಂಖ್ಯೆ 2020-21ರಲ್ಲಿ ರಾಜ್ಯದಲ್ಲಿ 296ಕ್ಕೆ ಏರಿಕೆಯಾಗಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ 2020 ರಲ್ಲಿ 184 ಪ್ರಕರಣ ದಾಖಲಾಗುವುದರೊಂದಿಗೆ ಕರ್ನಾಟಕ ಬಾಲ್ಯ ವಿವಾಹಗಳಲ್ಲಿ ಅಗ್ರಸ್ಥಾನದಲ್ಲಿರುವುದನ್ನು ಗಂಭೀರವಾಗಿ ಪರಿಗಣಿಸಿ ಇದೀಗ ಬಾಲ್ಯ ವಿವಾಹ ಪ್ರಕರಣಗಳಿಗೆ ಇತಿಶ್ರೀ ಹಾಡಲು ತೀರ್ಮಾನಿಸಲಾಗಿದೆ.
ಸುಳ್ಳು ಆರೋಪದ ಸೆರವಾಸಕ್ಕೆ 10 ಸಾವಿರ ಕೋಟಿ ಪರಿಹಾರ ಕೇಳಿದ ನಿರ್ದೋಷಿ
ಬಾಲ್ಯ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಪ್ರತಿ ಎರಡು ತಿಂಗಳಿಗೊಮ್ಮೆ ಗ್ರಾಪಂ ವ್ಯಾಪ್ತಿಯ ಸಮಿತಿಗಳು ಸಭೆ ನಡೆಸಬೇಕು, ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿಗಳು 3 ತಿಂಗಳಿಗೊಮ್ಮೆ ಹಾಗೂ ರಾಜ್ಯ ಮಟ್ಟದ ಸಮಿತಿಳು 6 ತಿಂಗಳಿಗೊಮ್ಮೆ ಸಭೆ ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ.