ಸಾರ್ವಜನಿಕರ ಸುಲಿಗೆ ಮಾಡುತ್ತಿದ್ದ ಬಾಲ್ಯ ಸ್ನೇಹಿತರ ಬಂಧನ

Spread the love

ಬೆಂಗಳೂರು,ಮೇ16- ಸ್ನೇಹಿತರ ಸ್ಕೂಟರ್‍ಗಳನ್ನು ಪಡೆದು ಮೊಬೈಲ್‍ಗಳನ್ನು ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿ 1.5 ಲಕ್ಷ ರೂ. ಬೆಲೆಯ ವಿವಿಧ ಕಂಪನಿಯ ಒಂಭತ್ತು ಮೊಬೈಲ್‍ಗಳನ್ನು ವಶಪಡಿಸಿಕೊಂಡಿ ದ್ದಾರೆ.
ವಿದ್ಯಾರಣ್ಯಪುರದ ದರ್ಶನ್(21), ಜಾರ್ಜ್(20) ಮತ್ತು ದಿನೇಶ್ ಅಲಿಯಾಸ್ ಅಪ್ಪು(23) ಬಂಧಿತರು.

ಮಾ.29ರಂದು ಸಂಜೆ 5 ಗಂಟೆಯಲ್ಲಿ ಇಸ್ರೋ ಲೇಔಟ್ ಬಾಲಕಿಯರ ನಿಲಯದಲ್ಲಿ ವಾಸವಿರುವ ಲಕ್ಷ್ಮಿ ಎಂಬ ಯುವತಿ ಕಾಲೇಜು ಮುಗಿಸಿಕೊಂಡು ಮೊಬೈಲ್‍ನಲ್ಲಿ ಮಾತನಾಡುತ್ತಾ ಹೊಗುತ್ತಿದ್ದರು. ನಾಗೇನಹಳ್ಳಿ ರೈಲ್ವೆ ಗೇಟ್ ಬಳಿಯ ಶೋಭಾ ಅಪಾರ್ಟ್‍ಮೆಂಟ್ ಮುಂಭಾಗದ ರಸ್ತೆ ಬಳಿ ಬರುತ್ತಿದ್ದಂತೆ ಹೊಂಡಾ ಡಿಯೋಬೈಕ್‍ನಲ್ಲಿ ಬಂದ ಇಬ್ಬರು ಅಪರಿಚಿತರು ಆಕೆಯ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಬಗ್ಗೆ ಆ ಯುವತಿ ಯಲಹಂಕ ಉಪನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಇನ್‍ಸ್ಪೆಕ್ಟರ್ ಆನಂದ್ ನಾಯ್ಕ ಅವರನ್ನೊಳಗೊಂಡ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಮೊದಲು ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿತು. ಇವರಿಬ್ಬರು ನೀಡಿದ ಮಾಹಿತಿ ಆಧರಿಸಿ ಮತ್ತೊಬ್ಬನನ್ನು ಬಂಧಿಸಿ 9 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳು ವಲ್ಲಿ ಯಶಸ್ವಿಯಾಗಿದೆ.

ಬಾಲ್ಯಸ್ನೇಹಿತರು:
ಈ ಮೂವರು ಆರೋಪಿಗಳು ಬಾಲ್ಯ ಸ್ನೇಹಿತರು. ಆರೋಪಿ ದರ್ಶನ್ ತಂದೆ-ತಾಯಿ ನಿಧನರಾಗಿದ್ದು, ಆತ ತನ್ನ ಸ್ನೇಹಿತರೊಂದಿಗೆ ಸಣ್ಣಪುಟ್ಟ ಕಳ್ಳತನ ಮಾಡಿ ಮೋಜಿನ ಜೀವನ ಮಾಡಿಕೊಂಡಿದ್ದರು. 2014ರಲ್ಲಿ ಸ್ನೇಹಿತ ಲಕ್ಷ್ಣ ಎಂಬಾತನೊಂದಿಗೆ ಸೇರಿ ಬೈಕ್ ಹಾಗೂ ಸ್ಕೂಟರ್‍ಗಳನ್ನು ಕಳವು ಮಾಡಿ ಯಲಹಂಕ ಉಪನಗರ ಪೊಲೀಸರಿಗೆ ದರ್ಶನ್ ಸಿಕ್ಕಿಬಿದ್ದು ಜೈಲಿಗೂ ಹೋಗಿದ್ದು, ಹೊರಬಂದ ನಂತರ ತಲೆಮರೆಸಿಕೊಂಡಿದ್ದನು.

ಕಳೆದ ಆರೇಳು ತಿಂಗಳಿನಿಂದ ಸ್ನೇಹಿತರ ಸ್ಕೂಟರ್‍ಗಳನ್ನು ಪಡೆದುಕೊಂಡು ಸ್ನೇಹಿತರ ಜೊತೆ ಸೇರಿ ಸಾರ್ವಜನಿಕರಿಂದ ಮೊಬೈಲ್ ಸುಲಿಗೆ ಮಾಡುತ್ತಿದ್ದನು. ಆರೋಪಿಗಳಾದ ದರ್ಶನ್ ಮತ್ತು ದಿನೇಶ್ ಇನ್ನೂ ಏಳು ಮೊಬೈಲ್ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿರುತ್ತದೆ.

ಈಶಾನ್ಯ ವಿಭಾಗದ ಉಪಪೊಲೀಸ್ ಆಯುಕ್ತ ಅನೂಪ್.ಎ ಶೆಟ್ಟಿ ಮಾರ್ಗದರ್ಶನದಲ್ಲಿ ಎಸಿಪಿ ಮನೋಜ್‍ಕುಮಾರ್ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಆನಂದ ನಾಯ್ಕ, ಸಬ್ ಇನ್‍ಸ್ಪೆಕ್ಟರ್ ಲೋಕರೆಡ್ಡಿ ಅವರನ್ನೊಳಗೊಂಡ ಸಿಬ್ಬಂದಿ ತಂಡವು ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತದೆ.

ಆರೋಪಿಗಳನ್ನು 30ನೇ ಎಸಿಎಂಎಂ ನ್ಯಾಯಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Facebook Comments