ಮಕ್ಕಳ ಲಸಿಕೆಗೆ ಪೋಷಕರು ಸಹಕಾರ ನೀಡಿ: ಸಚಿವ ನಾಗೇಶ್

Social Share

ಬೆಂಗಳೂರು,ಜ.3- ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿರುವ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಕಾರ ನೀಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕರೆ ನೀಡಿದ್ದಾರೆ.
ಕೋವಿಡ್ ಜೊತೆ ಜೀವನ ನಡೆಸುವುದು ಅನಿವಾರ್ಯವಾಗಿದ್ದು, ಕೋವಿಡ್ ಎದುರಿಸಲು ಎಲ್ಲರೂ ಲಸಿಕೆ ಪಡೆಯುವುದು ಅಗತ್ಯ. ಹೀಗಾಗಿ ಉಚಿತವಾಗಿ ನೀಡುತ್ತಿರುವ ಕೋವಿಡ್ ಲಸಿಕೆಯನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶದ 145 ಕೋಟಿ ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರವು ಕೈ ಜೋಡಿಸಿದ್ದು, ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಮಕ್ಕಳಿಗೆ ಲಸಿಕೆ ನೀಡುವುದು ಪ್ರಾರಂಭವಾಗಿದೆ.
ಮಕ್ಕಳಿಗೆ ಲಸಿಕೆ ಕೊಡಿಸಲು ಪೋಷಕರು ಕೂಡ ಸರ್ಕಾರದೊಂದಿಗೆ ಕೈ ಜೋಡಿಸಬೇಕು. ಯಾವ ಮಗುವು ಕೂಡ ಕೋವಿಡ್ ಕಾರಣಕ್ಕೆ ಶಿಕ್ಷಣದಿಂದ ವಂಚಿತವಾಗಬಾರದು. ಶಿಕ್ಷಣ ಅಪೂರ್ಣವಾಗಬಾರದು. ಹೀಗಾಗಿ ಲಸಿಕೆ ಪಡೆಯುವುದು ಅಗತ್ಯ. ಲಸಿಕೆ ಪಡೆದ ನಂತರ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆ ನಡೆಸಲು ಸಾಧ್ಯವಾಗಲಿದೆ.
ಲಸಿಕೆ ಪಡೆದರೂ ಕೂಡ ಸ್ವಚ್ಛತೆ, ಅಂತರ, ಮಾಸ್ಕ್ ಧರಿಸುವಿಕೆ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ಸಂಭವನೀಯ ಕೋವಿಡ್ 3ನೇ ಅಲೆಯನ್ನು ತಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Articles You Might Like

Share This Article