ಮಕ್ಕಳ ಲಸಿಕಾ ಅಭಿಯಾನಕ್ಕೆ ಕೌಂಟ್‍ಡೌನ್, ಲಸಿಕೆ ಪಡೆದ ಮಕ್ಕಳಿಗೆ ರಜೆ..?

Social Share

ಬೆಂಗಳೂರುಜ.1- ದೇಶದಲ್ಲಿ ರೂಪಾಂತರಗೊಂಡ 3ನೇ ಕೋವಿಡ್ ಅಲೆ ಬರಬಹುದೆಂಬ ಎಚ್ಚರಿಕೆಯ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯಾದ್ಯಂತ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು ಹಾಗೂ ಶಾಸಕರು ಸೇರಿದಂತೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಲಸಿಕಾ ಅಭಿಯಾನಕ್ಕೆ ಚಾಲನೆ ದೊರಕಲಿದೆ.
ದೇಶದಲ್ಲಿ ಕೋವಿಡ್ ಮಹಾಮಾರಿ ಬಂದು ಸರಿಸುಮಾರು ಎರಡು ವರ್ಷಗಳ ನಂತರ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ನೀಡುತ್ತಿರುವುದು ಇದೇ ಮೊದಲು. ಕರ್ನಾಟಕದಲ್ಲಿ ಈ ಕೋವಿಡ್ ಲಸಿಕೆಯನ್ನು ಯಶಸ್ವಿಗೊಳಿಸಲು ರಾಜ್ಯ ಸರ್ಕಾರ ಈಗಾಗಲೇ ಅಗತ್ಯ ಪೂರ್ವ ಸಿದ್ದತೆಗಳನ್ನು ಕೈಗೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡೆಸಿರುವ ಸಮೀಕ್ಷೆಯಂತೆ ರಾಜ್ಯದಲ್ಲಿ ಅಂದಾಜು 45 ಲಕ್ಷ ಮಕ್ಕಳು ಕೋವಿಡ್ ಲಸಿಕೆ ಪಡೆಯಲು ಅರ್ಹತೆಯನ್ನು ಪಡೆದಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ 25 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದ್ದು, ಸೋಮವಾರದೊಳಗೆ 10ರಿಂದ 12 ಲಕ್ಷ ಡೋಸ್ ಲಸಿಕೆ ಕೇಂದ್ರದಿಂದ ಬರುವ ನಿರೀಕ್ಷೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.
ಬೆಂಗಳೂರು ಸೇರಿದಂತೆ ಜಿಲ್ಲಾ , ತಾಲ್ಲೂಕು, ಹೋಬಳಿ ಹಾಗೂ ಗ್ರಾಮಪಂಚಾಯ್ತಿ ಮಟ್ಟದಲ್ಲೂ ಈ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ ಅರ್ಹ ವಿದ್ಯಾರ್ಥಿಗಳಿಗೆ ಕನಿಷ್ಟ 10 ದಿನದೊಳಗೆ ಪೂರ್ಣ ಪ್ರಮಾಣದ ಲಸಿಕೆಯನ್ನು ನೀಡಲು ಬೊಮ್ಮಾಯಿ ಅವರು ಅಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಲಸಿಕೆ ಪಡೆದ ಮಕ್ಕಳಿಗೆ ರಜೆ:
15 ರಿಂದ 18 ವರ್ಷದ ಮಕ್ಕಳಿಗೆ ನಾಳೆಯಿಂದ (ಜನವರಿ 03) ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಪಡೆದ ಮಕ್ಕಳಿಗೆ ರಜೆ ನೀಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ವಿದ್ಯಾರ್ಥಿಗಳು ಲಸಿಕೆ ಪಡೆದ ಮರುದಿನ ರಜೆ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಮೊದಲ ದಿನ 50 ವಿದ್ಯಾರ್ಥಿಗಳಿಗೆ ಮಾತ್ರ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಅಂದರೆ ಒಂದು ಶಾಲೆಯಲ್ಲಿ 50 ವಿದ್ಯಾರ್ಥಿಗಳಿಗೆ ಮಾತ್ರ ಕೋವಿಡ್ ಲಸಿಕೆ ನೀಡಲಾಗುತ್ತದೆ. ನಂತರದ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಕೊವಿಡ್ ಲಸಿಕೆ ನೀಡಲಾಗುತ್ತದೆ.
ಕೊವಿಡ್ ಲಸಿಕೆ ನೀಡುವ ವೇಳೆ ಶಾಲೆ ಬಳಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತದೆ. ಏನೇ ಆರೋಗ್ಯ ಸಮಸ್ಯೆ ಎದುರಾದರೂ ಆಸ್ಪತ್ರೆಗೆ ದಾಖಲಿಸಿ ಮಕ್ಕಳಿಗೆ ಚಿಕಿತ್ಸೆ ನೀಡಲು ಪೂರ್ಣ ತಯಾರಿ ಮಾಡಿಕೊಳ್ಳಲಾಗಿದೆ. ಮೊದಲ ಬಾರಿ ಮಕ್ಕಳಿಗೆ ವ್ಯಾಕ್ಸಿನ್ ಹಾಕುವ ಹಿನ್ನೆಲೆ, 30 ನಿಮಿಷ ಕಾಯುವ ಕೋಣೆಗೆ ಆದ್ಯತೆ ನೀಡಲಾಗಿದೆ.
ವ್ಯಾಕ್ಸಿನ್ ಪಡೆದ ವಿದ್ಯಾರ್ಥಿಗೆ ಕೈನೋವು, ಸುಸ್ತು, ಜ್ವರ ಕಾಣಿಸಿಕೊಂಡರೆ ರಜೆ ಪಡೆಯಬಹುದು ಪೋಷಕರಿಗೆ ಯಾವುದೇ ಆತಂಕ ಬೇಡ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕಾ ಕಾರ್ಯಕ್ರಮ ಆಯೋಜನೆ ಆಗುತ್ತದೆ. ಲಸಿಕೆ ಪಡೆಯಲು ಯಾವುದೇ ಒತ್ತಾಯ ಇರುವುದಿಲ್ಲ. ಆದರೆ ಪ್ರಸ್ತುತ ಮಕ್ಕಳಿಗೆ ಕೋವಿಡ್ ಬಾಧಿಸುತ್ತಿದೆ. ಲಸಿಕೆ ಪಡೆಯದವರಿಗೆ ಕೊರೊನಾ ಕಾಡಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಒಟ್ಟು 79 ಸಾವಿರ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡಲು ತಯಾರಿ ಮಾಡಲಾಗಿದೆ. ಲಸಿಕೆ ನೀಡಿಕೆ ಬಗ್ಗೆ ಈಗಾಗಲೆ ಪೋಷಕರ ಜೊತೆ ಸಬೆ ನಡೆಸಲಾಗಿದೆ. ಯಾವುದೇ ಪೆಪೋಷಕರು ಭಯ ಇಲ್ಲದೆ ಲಸಿಕೆ ಪಡೆಯಲು ಮುಂದಾಗಬೇಕು ಎಂದು ಸರ್ಕಾರ ಮನವಿ ಮಾಡಿದೆ.
ಜ.3ರಿಂದ 15ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ಹಾಗೂ ಜನವರಿ 10 ರಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಸಹ ಅಸ್ವಸ್ಥತೆ ಹೊಂದಿರುವ 60 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡಲು ಕೆಲವು ನಿಬಂಧನೆಗಳನ್ನು ವಿಸಿ ಮಾರ್ಗಸೂಚಿ ಹೊರಡಿಸಲಾಗಿದೆ.
2007ನೇ ಇಸವಿಯಲ್ಲಿ ಜನಿಸಿರುವ ಮತ್ತು 2007ನೇ ಇಸವಿಗೂ ಮುನ್ನ ಜನಿಸಿರುವ ಮಕ್ಕಳು ಕೋವಾಕ್ಸಿನ್ ಲಸಿಕೆ ಪಡೆಯಲು ಅರ್ಹರಿರುತ್ತಾರೆ. ಈ ಮಕ್ಕಳಿಗೆ ಈಗಾಗಲೇ ಚಾಲ್ತಿಯಲ್ಲಿರುವಂತೆ ಕೋವಾಕ್ಸಿನ್ ಲಸಿಕೆ 2 ಡೋಸ್ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ನೀಡಲಾಗುತ್ತದೆ.
ಫಲಾನುಭವಿ ಮತ್ತು ಮಕ್ಕಳು ಸ್ವಂತ ದೂರವಾಣಿ ಸಂಖ್ಯೆ ಬಳಸಿ ಅಥವಾ ಕೋವಿನ್ ನಲ್ಲಿ ಈಗಾಗಲೇ ಇರುವ ತಂದೆ-ತಾಯಿಗಳ ಪೋಷಕರ ಅಕೌಂಟ್‍ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದು ಯಾವುದೂ ಲಭ್ಯವಿಲ್ಲದಿದ್ದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರ ದೂರವಾಣಿ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಕೋವಿಡ್-19 ಲಸಿಕಾಕರಣ ಪ್ರಕ್ರಿಯೆಗಾಗಿ ಶಾಲೆಯ ಗುರುತಿನ ಚೀಟಿ ಅಥವಾ ಆಧಾರ್ ಬಳಸಿ ಪೋಟೋ ಐಡಿಯನ್ನು ಹಾಜರುಪಡಿಸಬೇಕು.
ಅಸ್ವಸ್ಥತೆ ಹೊಂದಿರುವ ಮಕ್ಕಲಿಗೆ ಲಸಿಕೆ ನೀಡಲು ಪೋಷಕರ ಸಹಮತ ಅಗತ್ಯ. ಆರೋಗ್ಯ ಕೇಂದ್ರಗಳಲ್ಲಿಯೇ ವೈದ್ಯರಿಂದ ಮೇಲ್ವಿಚಾರಣೆ ನಡೆಸಬೇಕು.
ಶಿಕ್ಷಣ ಸಂಸ್ಥೆಗಳಲ್ಲಿ ಲಸಿಕೆ ಪಡೆಯದವರನ್ನು ಗುರುತಿಸಿ, ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಬೇಕು
ಖಾಸಗಿ ಶಾಲೆಗಳು ಇಷ್ಟಪಟ್ಟಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಲಸಿಕಾ ಅಭಿಯಾನ ಕೈಗೊಳ್ಳಲು ಅವಕಾಶ ನೀಡಬಹುದು.
ಎಲ್ಲಾ ಹಂತಗಳಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದರೊಂದಿಗೆ ಕೋವಿಡ್-19 ಲಸಿಕಾಕರಣದ ಮಾರ್ಗೂಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಬೂಸ್ಟರ್ ಡೋಸ್: ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ ಸಹ ಅಸ್ವಸ್ಥತೆ ಹೊಂದಿದ 60 ವರ್ಷ ಮೇಲ್ಪಟ್ಟ ನಾಗರಿಕರು ಈಗಾಗಲೇ ಅಸ್ತಿತ್ವದಲ್ಲಿರುವ ತಮ್ಮ ಕೋವಿನ್ ಅಕೌಂಟ್ ಮೂಲಕ ಲಸಿಕೆ ಪಡೆಯಬಹುದಾಗಿದೆ.

Articles You Might Like

Share This Article