ಮಕ್ಕಳ ಲಸಿಕಾ ಅಭಿಯಾನ ಯಶಸ್ಸಿಗೆ ಸಿಎಂ ಸೂಚನೆ

Social Share

ಬೆಂಗಳೂರುಜ.1- ಸೋಮವಾರದಿಂದ ರಾಜ್ಯಾದ್ಯಂತ ಆರಂಭವಾ ಗಲಿರುವ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಧಾನಸೌಧದಲ್ಲಿ ಔಪಚಾರಿಕವಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸೂಚನೆಯಂತೆ ಸೋಮವಾರ ರಾಜ್ಯಾದ್ಯಂತ 15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ.
ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಕೋವಿಡ್ ವಾರಿಯರ್ಸ್‍ಗಳು ಮತ್ತಿತರರು ಇದರಲ್ಲಿ ಭಾಗವಹಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಮತ್ತು ಕೋವಿಡ್ ಜಿಲ್ಲಾ ಉಸ್ತುವಾರಿ ಸಚಿವರುಗಳು ಅಭಿಯಾನದಲ್ಲಿ ಭಾಗಿಯಾಗಬೇಕು. ನಾನು ಸೇರಿದಂತೆ ಜನಪ್ರತಿನಿಗಳು, ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳು ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ ಇದನ್ನು ಯಶಸ್ವಿಯಾಗಿ ನಡೆಸಲು ನಾವು ಪಣ ತೊಟ್ಟಿದ್ದೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ಅಧಿಕಾರಿಗಳ ಜೊತೆ ಔಪಚಾರಿಕವಾಗಿ ಸಭೆ ನಡೆಸಿದ ಬೊಮ್ಮಾಯಿ ಅವರು ನಿಮ್ಮ ಕರ್ತವ್ಯದಲ್ಲಿ ನಾನು ಯಾವುದೇ ರೀತಿಯಲ್ಲೂ ಮಧ್ಯಪ್ರವೇಶ ಮಾಡುವುದಿಲ್ಲ. ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಅದರ ಯೋಜನೆಯನ್ನು ಜನರು ಪಡೆಯುವಂತಾಗಲು ನಿಮ್ಮ ಸಹಕಾರ ಅತ್ಯಗತ್ಯ ಎಂದು ಸಲಹೆ ಮಾಡಿದರು.
ಸರ್ಕಾರ ಯೋಜನೆಗಳನ್ನು ಘೋಷಣೆ ಮಾಡುತ್ತದೆ. ಅದನ್ನು ಅನುಷ್ಠಾನ ಮಾಡುವುದು ಅಧಿಕಾರಿಗಳ ಕರ್ತವ್ಯ. ಕೆಳಹಂತದಲ್ಲಿ ನೀವು ಶ್ರಮವಹಿಸಿದರೆ ಫಲಾನುಭವಿಗಳಿಗೆ ಇದು ತಲುಪುತ್ತದೆ. ಇದರಿಂದ ಯೋಜನೆಯ ಸಾರ್ಥಕತೆಯು ಈಡೇರುತ್ತದೆ ಎಂದು ಅಭಿಪ್ರಾಯಪಟ್ಟರು.
ನಿಮ್ಮ ಜೊತೆ ನಾನು ಯಾವಾಗಲೂ ಇರುತ್ತೇನೆ. ನೀವೆಲ್ಲರೂ ಆಡಳಿತದಲ್ಲಿ ಅಪಾರವಾದ ಅನುಭವವನ್ನು ಹೊಂದಿದ್ದೀರಿ.
ನಿಮಗೆ ಎಲ್ಲ ರೀತಿಯ ಸಹಕಾರ ಕೊಡಲು ನಮ್ಮ ಸರ್ಕಾರ ಸಿದ್ದವಿದೆ. ನನಗೆ ಪೂರ್ಣ ಪ್ರಮಾಣದಲ್ಲಿ ಬದ್ದತೆಯಿಂದ ಕೆಲಸ ಮಾಡಬೇಕೆಂಬುದು ನನ್ನ ನಿರೀಕ್ಷೆ. ಅದಕ್ಕೆ ತಕ್ಕಂತೆ ನೀವೆಲ್ಲರೂ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.
ಯಾವುದೇ ಒತ್ತಡಕ್ಕೆ ಒಳಗಾಗದೆ ಕೆಲಸ ಮಾಡಿ. ನಿಮ್ಮ ಉದ್ದೇಶವು ಸರಿ ಇರಲಿ. ನಿರ್ಭಯವಾಗಿ ಕೆಲಸ ಮಾಡಿದರೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಲೋಪದೋಷಗಳಾದರೆ ನನಗೆ ಸಹಿಸಲು ಆಗುವುದಿಲ್ಲ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್, ಬೆಂಗಳೂರುನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಬಿಬಿಎಂಪಿ ವಿಶೇಷ ಆಯುಕ್ತ ಗೌರವ ಗುಪ್ತ ಸೇರಿದಂತೆ ಮತ್ತಿತರ ಅಕಾರಿಗಳು ಹಾಜರಿದ್ದರು.

Articles You Might Like

Share This Article