ಇಸ್ಲಮಾಬಾದ್, ಜ.27- ಪಾಕಿಸ್ತಾನವು ಭರತದ ಜತೆಗೆ ನಿರಂತರ ಸಂಘರ್ಷದಲ್ಲಿರುವುದನ್ನು ಖಚಿತಪಡಿಸಿಕೊಳ್ಳುವ ಕ್ರಮವಾಗಿ ಚೀನಾ ದೇಶವು ಪಾಕ್‍ಗೆ ತಾನು ನಿರ್ಮಿಸಿರುವ ವಾಹನ ಚಾಲಿತ ಹೂವಿಟ್ಜರ್ ಫಿರಂಗಿಗಳು ಸೇರಿದಂತೆ ಹಲವಾರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ.
ಭಾರತದ ಕೆ-9 ವಜ್ರ ಹೂವಿಟ್ಜರ್ ಫಿರಂಗಿಗಳಿಗೆ ಪ್ರತಿಯಾಗಿ ಇದನ್ನು ಪೂರೈಸಲಾಗಿದೆ ಎಂದು ಹೇಳಲಾಗಿದೆ. ಬೀಜಿಂಗ್ ರಾವಲ್ಪಿಂಡಿಗೆ ನಾರಿಂಕೋ ಎಆರ್-1 300ಮಿ.ಮೀ. ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್‍ಗಳನ್ನು ಸರಬರಾಜು ಮಾಡುತ್ತಿದೆ. ಇದರಿಂದ ಪಾಕಿಸ್ತಾನ ಸೇನೆಯು ಭಾರತದ ರಾಕೆಟ್ ಲಾಂಚರ್‍ಗಳಿಗೆ ಪ್ರತ್ಯುತ್ತರ ನೀಡಲು ಸಾಧ್ಯವಾಗುತ್ತದೆ ಎನ್ನುವುದು ಚೀನಾದ ಹವಣಿಕೆಯಾಗಿರುವಂತಿದೆ. ಈ ಎಲ್ಲದರ ಒಟ್ಟಾರೆ ಗುತ್ತಿಗೆ 512 ದಶಲಕ್ಷ ಅಮೆರಿಕನ್ ಡಾಲರ್‍ಗಳಷ್ಟಿದೆ.
ರಾವಲ್ಪಿಂಡಿ ಸರ್ಕಾರದ ಕೇಂದ್ರ ಕಚೇರಿಯನ್ನು ಭಾರತದೊಂದಿಗೆ ಶಾಶ್ವತವಾಗಿ ಸಂಘರ್ಷದಲ್ಲಿರುವಂತೆ ನೋಡಿಕೊಳ್ಳಲು ಚೀನಾ ಸಾಂಪ್ರದಾಯಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳು, ಯುದ್ಧ ವಿಮಾನ, ವಿಧ್ವಂಸಕ ಶಸ್ತ್ರಾಸ್ತ್ರಗಳು, ಜತೆಗೆ ಭಾರತದ ಇತ್ತೀಚಿನ ಶಸ್ತ್ರಾಸ್ತ್ರ ಸಂಗ್ರಹಕ್ಕೆ ಪ್ರತಿಯಾಗಿ ಡಿಎಫ್-17 ಹೈಪರ್‍ಸಾನಿಕ್ ಕ್ಷಿಪಣಿಗಳನ್ನು ಸಹ ಪಾಕಿಸ್ತಾನಕ್ಕೆ ಒದಗಿಸುತ್ತಿದೆ ಎನ್ನಲಾಗಿದೆ.
ಪಾಕ್‍ಅನ್ನು ಒಂದು ಅಣ್ವಸ್ತ್ರ ರಾಷ್ಟ್ರವನ್ನಾಗಿಸುವಲ್ಲಿಯೂ ಚೀನಾ ತಲೆ ಹಾಕುತ್ತಿದ್ದು, 1990 ರಿಂದ ಉನ್ನತ ಡೆಲಿವರಿ ವ್ಯವಸ್ಥೆಗಳನ್ನು ಸರಬರಾಜು ಮಾಡುತ್ತಿದೆ ಎಂಬುದು ರುಜುವಾತಾಗಿದೆ.
ಈ ಹಿಂದೆ ಇಂಥ ಪ್ರಯತ್ನಗಳು ಚೀನಾ ಪಾಲಿಗೆ ಲಾಭದಾಯಕವಾಗಿ ಪರಿಣಮಿಸಿದೆ. ಶತ್ರುವಿನ ಶತ್ರು ತನಗೆ ಮಿತ್ರ ಎಂಬ ಧೋರಣೆಯ ಚೀನಾ ಭಾರತದ ಮೇಲೆ ಪಾಕ್‍ಅನ್ನು ಎತ್ತಿಕಟ್ಟುತ್ತ ತನ್ನ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ಹಾಕುತ್ತಿರುವುದು ನಿಚ್ಚಳವಾಗಿ ಗೋಚರಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳಿಂದ ಭಾರತವು ಗಡಿ ಭಾಗಗಳಲ್ಲಿ ತನ್ನ ಸೇನಾ ತುಕಡಿಗಳನ್ನು ಕಟ್ಟೆಚ್ಚರದಲ್ಲಿರಿಸಬೇಕಾಗಿದೆ.
