ಗಾಲ್ವಾನ್,ಜ.3- ಗಡಿ ಭಾಗದಲ್ಲಿ ಚೀನ ಮತ್ತೊಮ್ಮೆ ತಗಾದೆ ತೆಗೆದಿದ್ದು, ಎರಡು ವರ್ಷಗಳ ಬಳಿಕ ಉದ್ವಿಗ್ನ ಪರಿಸ್ಥಿತಿ ಪನರಾವರ್ತನೆಯಾಗಿದೆ.
ಭಾರತದ ಗಡಿಭಾಗ ಗಾಲ್ವಾನ್ನಲ್ಲಿ ಹೊಸ ವರ್ಷ ಆಚರಣೆ ವೇಳೆ ಚೀನಾ ತನ್ನ ರಾಷ್ಟ್ರಧ್ವಜವನ್ನು ಪ್ರದರ್ಶನ ಮಾಡಿದೆ. ಅರುಣಾಚಲ ಪ್ರದೇಶದ ವ್ಯಾಪ್ತಿಗೆ ಒಳಪಡುವ ಈ ಜಾಗದಲ್ಲಿ ಚೀನಾ ಸೈನಿಕರು ಶಸ್ತ್ರ ಸಜ್ಜಿತರಾಗಿ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಪೋಸ್ಟ್ ಮಾಡಿ ಟ್ವೀಟ್ ಮಾಡಿರುವ ಚೀನಾ ಸರ್ಕಾರದ ಅಂಗೀಕೃತ ಮಾಧ್ಯಮ ಸಂಸ್ಥೆ ಗ್ಲೋಬಲ್ ಟೈಮ್ಸ್, ಗಾಲ್ವಾನ್ ವ್ಯಾಲಿಯಲ್ಲಿ ಪೀಪಲ್ ಲಿಬರೇಷನ್ ಆರ್ಮಿ ಸೈನಿಕರು ಮಹತ್ವದ್ದನ್ನು ಪ್ರದರ್ಶಿಸಿದ್ದಾರೆ. ಒಂದಿಂಚು ಭೂಮಿಯನ್ನು ಬಿಟ್ಟುಕೊಡಬೇಡಿ ಎಂದು ಹುರಿದುಂಬಿಸುವ ಮೂಲಕ ಹೊಸ ವರ್ಷದ ಶುಭಾಷಯಗಳನ್ನು ತಿಳಿಸಿದ್ದಾರೆ.
ಮತ್ತೊಂದು ಮಾಧ್ಯಮ ಸಂಸ್ಥೆ ಶೈನ್ ಶಿವಾಯ್ ಕೂಡ ಈ ವಿಡಯೋವನ್ನು ಅಪ್ಲೋಡ್ ಮಾಡಿದ್ದು, ಬೀಜಿಂಗ್ನ ತೈನಾಮೆನ್ ಚೌಕದ ಬಳಿಕ ಗಾಲ್ವಾನದಲ್ಲಿ ಧ್ವಜಾರೋಹಣವಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿಕೊಂಡಿದೆ.
ಚೀನಾದ ತಗಾದೆಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಮೊದಲು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಚಿ ಅವರು ಡಿ.30ರಂದು ಹೇಳಿಕೆ ನೀಡಿ, ಚೀನಾ ಭಾರತದ ಸಾರ್ವಭೌಮತೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದೆ. ಸಂಯುಕ್ತ ಪ್ರದೇಶವಾದ ಅರುಣಾಚಲ ಪ್ರದೇಶದಲ್ಲಿ ಸುಮಾರು 15 ಗ್ರಾಮಗಳ ಹೆಸರನ್ನು ಬದಲಾವಣೆ ಮಾಡಲಾಗಿದೆ. ಪದೇ ಪದೇ ಈ ರೀತಿಯ ಪ್ರಯತ್ನವನ್ನು ಚೀನಾ ಮಾಡುತ್ತಲೇ ಇದೆ. 2017ರಲ್ಲೂ ಹೆಸರು ಬದಲಾವಣೆ ಮಾಡಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ಗಡಿ ಭಾಗದಲ್ಲಿ ಚೀನಾದ ಗಡಿ ಕ್ಯಾತೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿಯವರ ಮೌನವನ್ನು ಪ್ರಶ್ನಿಸಿದೆ.
ರಾಹುಲ್ ಗಾಂಧಿಯವರು ಟ್ವೀಟ್ ಮಾಡಿದ್ದು, ಕೆಲವೇ ದಿನಗಳ ಹಿಂದೆ ನಾವು 1971ರ ಪರಾಕ್ರಮ ವಿಜಯ ದಿವಸವನ್ನು ಆಚರಿಸಿದ್ದೇವೆ.
ಭಾರತದ ಸುರಕ್ಷತೆ ಮತ್ತು ವಿಜಯಕ್ಕಾಗಿ ಬಲಿಷ್ಟವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಬೂಟಾಟಿಕೆ ಮಾತುಗಳಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ಅವರು ಮೌನ ಮುರಿದು ಮಾತನಾಡಬೇಕು. ಗಲ್ವಾನದಲ್ಲಿ ತ್ರಿವರ್ಣಧ್ವಜದ ಬದಲಾಗಿ ಚೀನಾ ಧ್ವಜ ಹಾರಾಟವಾಗಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
