ನವದೆಹಲಿ, ಜ.23- ಅರುಣಾಚಲ ಪ್ರದೇಶದ ತನ್ನ ಗ್ರಾಮದಿಂದ ಕಾಣೆಯಾಗಿದ್ದ ಯುವಕನನ್ನು ಚೀನಾದ ಪಿಪಲ್ ಲಿಬರೇಷನ್ ಆರ್ಮಿ ಪತ್ತೆ ಮಾಡಿದ್ದು, ಆತನನ್ನು ಭಾರತಕ್ಕೆ ಒಪ್ಪಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಚೀನಾ ಸೇನೆಯ ಅಕಾರಿಗಳು ಭಾರತೀಯ ಸೇನೆಯನ್ನು ಸಂಪರ್ಕಿಸಿದ್ದು, ಅರುಣಾಚಲ ಪ್ರದೇಶದಿಂದ ಕಾಣೆಯಾಗಿದ್ದ ಯುವಕ ಪತ್ತೆಯಾಗಿದ್ದಾನೆ. ಮುಂದಿನ ಕಾನೂನು ಕ್ರಮಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ ಎಂದು ರಕ್ಷಣಾ ಪಡೆಗಳ ತೆಝಪುರ್ ಸಾರ್ವಜನಿಕ ಸಂಪರ್ಕ ಅಕಾರಿ ಲೆಫ್ಟಿನೆಂಟ್ ಕರ್ನಲ್ ಹರ್ಷವರ್ಧನ್ ಪಾಂಡೆ ಭಾನುವಾರ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದ ಸಿಯುಂಗ್ಲಾ ಪ್ರಾಂತ್ಯದ ಲುಂಗ್ಟ ಜೊರ್‍ನಿಂದ 17 ವರ್ಷದ ಮೈರಾಮ್ ಟರೋಣ್ ಎಂಬ ಯುವಕ ಜನವರಿ 18ರಿಂದ ಕಾಣೆಯಾಗಿದ್ದ. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯದ ಸಂಸದರ ತಾಪಿರ್ ಗಾಂವ್ ಅವರು ಮೈರಾಮ್‍ರನ್ನು ಚೀನಾದ ಸೇನೆ ಭಾರತೀಯ ಗಡಿ ಒಳಗೆ ಬಂದು ಝಿಡೋ ವಿಲ್ ಗ್ರಾಮದಿಂದ ಅಪಹರಣ ಮಾಡಿದೆ. ಮೈರಾಮ್ ಜೊತೆಯಲ್ಲಿದ್ದ ಸ್ನೇಹಿತ ಸೇನೆಯಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾನೆ ಎಂದು ಹೇಳಿದ್ದರು.
2018ರಲ್ಲಿ ಚೀನಾ ಅರುಣಾಚಲ ಪ್ರದೇಶದ ಲುಂಗ್ಟ ಜೋರ್ ಪ್ರದೇಶದಲ್ಲಿ ಮೂರ್ನಾಲ್ಕು ಕಿಲೋ ಮೀಟರ್‍ನಷ್ಟು ರಸ್ತೆ ನಿರ್ಮಾಣ ಮಾಡಿತ್ತು. ತ್ಸಾಂಗ್ಪೋ ನದಿ ದಡದಿಂದ ಪ್ರವೇಶ ಮಾಡಿದ ಚೀನಾ ಸೇನೆ ಭಾರತೀಯನನ್ನು ಅಪಹರಣ ಮಾಡಿದೆ ಎಂದು ಅವರು ದೂರಿದ್ದರು.
ಘಟನೆ ಬೆಳಕಿಗೆ ಬಂದ ಬಳಿಕ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರು ಚೀನಾ ಭಾರತದ ಗಡಿಯಲ್ಲಿ ಅತಿಕ್ರಮಣಕಾರಿ ಕೃತ್ಯಗಳನ್ನು ನಡೆಸುತ್ತಿದ್ದರೂ ಪ್ರಧಾನಿ ಮೌನಕ್ಕೆ ಶರಣಾಗಿದ್ದಾರೆ ಎಂದು ಅಸಮದಾನ ವ್ಯಕ್ತ ಪಡಿಸಿದ್ದರು.
ಕಾಣೆಯಾಗಿರುವ ಯುವಕನ ಮಾಹಿತಿಯನ್ನು ಚೀನಾ ಸೇನೆಗೆ ರವಾನಿಸಿದ ಭಾರತೀಯ ಸೇನಾಕಾರಿಗಳು ಈತ ನಿಮ್ಮ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದರೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದರು. ಅದರಂತೆ ಈಗ ಚೀನಾ ಸೇನಾಕಾರಿಗಳು ಕಾಣೆಯಾಗಿದ್ದ ಯುವಕ ಪತ್ತೆಯಾಗಿರುವ ಮಾಹಿತಿ ನೀಡಿದೆ.
