ನಮ್ಮ ಹಡಗಿನಿಂದ ಯಾರಿಗೂ ಹಾನಿ ಆಗಲ್ಲ : ಚೀನಾ

Social Share

ಬೀಜಿಂಗ್, ಆ.17- ಭಾರತದ ನೆರೆಯ ಶ್ರೀಲಂಕಾದ ಸಮುದ್ರ ದಂಡೆಯಲ್ಲಿ ಲಂಗರು ಹಾಕಿರುವ ಚೀನಾದ ಅತ್ಯಾಧುನಿಕ ಹಡಗಿನಿಂದ ಯಾವುದೇ ದೇಶಕ್ಕೆ ಹಾನಿಯಾಗುವುದಿಲ್ಲ ಮತ್ತು ಮೂರನೇ ವ್ಯಕ್ತಿ ಹಡಗು ನಿಲುಗಡೆಗೆ ತಡೆಯೊಡ್ಡಲು ಸಾಧ್ಯವಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‍ಬಿನ್ ಹೇಳಿದ್ದಾರೆ.

ಭಾರತ ಮತ್ತು ಅಮೆರಿಕಾದ ಆತಂಕಗಳಿಗೆ ಚೀನಾ ಸ್ಪಷ್ಟನೆ ನೀಡಿದೆ. ಯುನ್ ವಾಂಗ್ 5 ಹೆಸರಿನ ತನ್ನ ಹಡಗನ್ನು ಚೀನಾ ಶ್ರೀಲಂಕಾದ ದಕ್ಷಿಣ ವಲಯದಲ್ಲಿನ ಹಂಬಂಟೋಟಾದ ಬಂದರಿನಲ್ಲಿ ಭಾರತದ ಸಮುದ್ರ ಪ್ರಾಂತ್ಯ ಸಮೀಪದಲ್ಲಿ ನಿಲ್ಲಿಸಿದೆ. ಇದು ಅತ್ಯಾಧುನಿಕ ಹಗಡು ಆಗಿರುವುದರಿಂದ ಗೂಢಾಚಾರಿಕೆಗೆ ಬಳಕೆಯಾಗುವ ಆತಂಕ ವ್ಯಕ್ತವಾಗಿದೆ.

ಹಡಗು ನಿಲ್ಲಿಸುವ ಮುನ್ನಾ ಚೀನಾಗೆ ಶ್ರೀಲಂಕಾಗೆ ಆರ್ಥಿಕ ಬೆಂಬಲವನ್ನು ಮುಂದುವರೆಸುವುದಾಗಿ ಭರವಸೆ ನೀಡಿತ್ತು. ಸುಮಾರು 51 ಬಿಲಿಯನ್ ಡಾಲರ್ ವಿದೇಶಿ ಸಾಲದ ಹೊರೆಯಿಂದ ದಿವಾಳಿಯಾಗಿರುವ ಶ್ರೀಲಂಕಾ, ಬಿಜೀಂಗ್‍ನ ವಿದೇಶಾಂಗ ಇಲಾಖೆಯ ತಾಳಕ್ಕೆ ಕುಣಿಯುವಂತಾಗಿದೆ. ಚೀನಾ ತಾನು ನೀಡಿದ ಸಾಲಕ್ಕೆ ಬದಲಾಗಿ 2017ರಿಂದ 99 ವರ್ಷಗಳವರೆಗೂ ಶ್ರೀಲಂಕಾದ ಬಂದರನ್ನು ಬೋಗ್ಯಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ.

ಹಡಗು ಶ್ರೀಲಂಕಾಕ್ಕೆ ಆಗಮಿಸಿದ ವೇಳೆ ಚೀನಾ ರಾಯಭಾರ ಕಚೇರಿ ಸ್ವಾಗತ ಸಮಾರಂಭವನ್ನು ಆಯೋಜಿಸಿತ್ತು. ಶ್ರೀಲಂಕಾ ಅಧ್ಯಕ್ಷ ರಣೀಲ ವಿಕ್ರಮಸಿಂಘೆ ಖುದ್ದು ಹಾಜರಿದ್ದು ಕೆಂಪು ಹಾಸಿನ ಸ್ವಾಗತ ನೀಡಿದರು. ಉಭಯ ದೇಶಗಳ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಶ್ರೀಲಂಕಾದ ನೃತ್ಯಗಾರರು ಸಾಂಪ್ರದಾಯಿಕ ನೃತ್ಯದ ಮೂಲಕ ಹಾರ್ದಿಕ ಸ್ವಾಗತ ನೀಡಿದರು.

ಯನ್ ವಾಂಗ್ 5 ಲಂಗರು ಹಾಕಿ, ಅಗತ್ಯ ಸರಬರಾಜುಗಳ ಮೂಲಕ ಸಂಪೂರ್ಣ ಸ್ಥಿರತೆ ಸಾಧಿಸಲು ಕೆಲ ಸಮಯ ಬೇಕಾಗಬಹುದು. ನಂತರ ಕಾರ್ಯಾಚರಣೆ ಆರಂಭಿಸಲಿದೆ ಎನ್ನಲಾಗಿದೆ. ಅತ್ಯಾಧುನಿಕ ಹಡಗಿನಲ್ಲಿ ಉಪಗ್ರಹ ವಿಶೇಷತೆ, ಖಂಡಾಂತರ ಕ್ಷಿಪಣಿ ನಿಗಾವಣೆ ಸೇರಿದಂತೆ ಅನೇಕ ಆಧುನಿಕ ಸೌಲಭ್ಯಗಳಿವೆ.

ಆಗಸ್ಟ್ 8ರಂದು ತನ್ನ ಬಳಿ ಬಂದ ಹಡಗಗಿನ ನಿಲ್ದಾಣಕ್ಕೆ ಶ್ರೀಲಂಕಾ ಮೊದಲು ಅವಕಾಶ ನಿರಾಕರಿಸಿತ್ತು. ಮುನ್ಸೂಚನೆ ಇಲ್ಲದೆ ಹಡಗು ಬಂದಿರುವುದು ಅನ್ಯಾಯದ ಪರಮಾವ ಎಂದು ಆಕ್ಷೇಪಿಸಿತ್ತು. ಈಗ ವಾಪಾಸ್ ಹೋಗಿ ಕೆಲ ದಿನಗಳ ನಂತರ ಆಗಮಿಸುವಂತೆ ಸಲಹೆ ನೀಡಿತ್ತು. ಆದರೆ ಚೀನಾದ ಒಳಾಡಳಿತದ ಮಧ್ಯ ಪ್ರವೇಶದಿಂದ ಶ್ರೀಲಂಕಾ ತಣ್ಣಗಾಗಿದ್ದು, ಹಡಗು ಲಂಗರು ಹಾಕಲು ಸಹಮತಿಸಿದೆ. ಹಗಡಿನಲ್ಲಿ ಸುಮಾರು 2 ಸಾವಿರ ಸಿಬ್ಬಂದಿಗಳಿದ್ದಾರೆ.

ಈ ಬೆಳವಣಿಗೆ ಭಾರತದ ರಕ್ಷಣಾ ವ್ಯವಸ್ಥೆಯನ್ನು ಕಳವಳಕ್ಕೀಡು ಮಾಡಿದೆ. ಆದಕ್ಕೆ ಉದ್ದಟತನದಿಂದಲೇ ಉತ್ತರ ನೀಡಿರುವ ಚೀನಾ, ಹಡಗಿನಿಂದ ಯಾವುದೇ ದೇಶದ ಭದ್ರತೆ ಮತ್ತು ಆರ್ಥಿಕತೆಗೆ ಹಾನಿಯಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. ಶ್ರೀಲಂಕಾದ ಸಹಕಾರದಿಂದಲೇ ಹಡಗು ನಿಲ್ದಾಣ ಪ್ರವೇಶಿಸಿದೆ. ಹೀಗಾಗಿ ಮೂರನೇ ವ್ಯಕ್ತಿ ಅಡ್ಡಿ ಪಡಿಸಲು ಅವಕಾಶವಿಲ್ಲ ಎಂದು ಪರೋಕ್ಷವಾಗಿ ಭಾರತಕ್ಕೆ ತಿರುಗೇಟು ನೀಡಿದೆ.

ಅಮೆರಿಕಾ ಮತ್ತು ಭಾರತ ಎರಡು ದೇಶಗಳು ಹಡಗಿನ ಚಟುವಟಿಕೆಗಳ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದು, ಮುಂದಿನ ದಿನಗಳಲ್ಲಿಲ ಅನುಸರಿಸಬೇಕಾದ ತಂತ್ರಗಾರಿಕೆಗಳ ಬಗ್ಗೆ ಸಮಾಲೋಚನೆ ನಡೆಸಿವೆ.

Articles You Might Like

Share This Article