ಕೊಲಂಬೊ, ಆ.16 – ಭಾರತದ ಕಳವಳದ ನಡುವೆ ಚೀನಾದ ಗುಪ್ತಚರ ಹಡಗು ಇಂದು ಶ್ರೀಲಂಕಾದ ದಕ್ಷಿಣದ ಹಂಬಂಟೋಟಾ ಬಂದರಿಗೆ ಬಂದಿದೆ. ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಪಗ್ರಹ ಟ್ರ್ಯಾಕಿಂಗ್ ಹಡಗು ಯುವಾನ್ ವಾಂಗ್ 5 ಸ್ಥಳೀಯ ಕಾಲಮಾನ ಬೆಳಗ್ಗೆ 8.20ಕ್ಕೆ ಹಂಬಂಟೋಟದ ದಕ್ಷಿಣ ಬಂದರಿಗೆ ಆಗಮಿಸಿತು. ಮುಂದಿನ ಆ. 22 ರವರೆಗೆ ಅಲ್ಲಿರಲಿದ್ದು, ಭಾರತ, ಇಂಡೋನೇಷಿಯಾ, ಬಂಗ್ಲಾದೇಶ ಸೇರಿದಂತೆ ಹಲವಾರು ದೇಶಗಳ ರಹಸ್ಯ ಮಾಹಿತಿ ಹ್ಯಾಕ್ ಮಾಡುವ ಸಾಧ್ಯತೆ ಇದೆ.
ಆ 11 ರಂದು ಆಗಮಿಸಬೇಕಿತ್ತು ಆದರೆ ಶ್ರೀಲಂಕಾದ ಅಧಿಕಾರಿಗಳ ಅನುಮತಿ ಇಲ್ಲದ ಕಾರಣ ತಡವಾಯಿತು.
ಆದರೆ ಶನಿವಾರ ಮರುಪೂರಣ ಉದ್ದೇಶಕ್ಕಾಗಿ ಹಡಗು ಬಂದರು ಪ್ರವೇಶಕ್ಕೆ ರಕ್ಷಣಾ ಸಚಿವಾಲಯದಿಂದ ಭದ್ರತಾ ಅನುಮತಿಯನ್ನು ನೀಡಲಾಗಿದೆ ಎಂದು ಲಂಕಾ ಹೇಳಿದೆ.
ಲಂಕಾ ಬಂದರಿಗೆ ಹೋಗುವ ಮಾರ್ಗದಲ್ಲಿ ಹಡಗಿನ ಟ್ರ್ಯಾಕಿಂಗ್ ವ್ಯವಸ್ಥೆಗಳು ಭಾರತೀಯ ರಕ್ಷಣಾ ಕೇಂದ್ರಗಳ ಮಾಹಿತಿ ಹೈಜಾಕ್ ಮಾಡಲು ಪ್ರಯತ್ನಿಸುವ ಸಾಧ್ಯತೆಯ ಬಗ್ಗೆ ಭಾರತಕ್ಕೆ ಆತಂಕಗಳು ಇದ್ದವು. ರಾಜತಾಂತ್ರಿಕ ಮಾರ್ಗಗಳ ಮೂಲಕ ಉನ್ನತ ಮಟ್ಟದಲ್ಲಿ ವ್ಯಾಪಕ ಸ್ನೇಹ, ಪರಸ್ಪರ ನಂಬಿಕೆ ಮತ್ತು ರಚನಾತ್ಮಕ ಸಂಭಾಷಣೆಯ ಮನೋಭಾವದಲ್ಲಿ ವಿಷಯವನ್ನು ಪರಿಹರಿಸುವ ಉದ್ದೇಶವಿದೆ ಎಂದು ಲಂಕಾ ವಿದೇಶಾಂಗ ಸಚಿವಾಲಯ ಹೇಳಿದೆ.
ಆದರೂ ಚೀನಾದ ಮೇಲೆ ಯಾವುದೇ ನಂಬಿಕೆ ಇಡಲು ಸಾಧ್ಯವೇ ಇಲ್ಲ ಅದರಿಂದ ಭಾರತ ರಕ್ಷಣಾ ಪಡೆ ಅಕಾರಿಗಳು ಗೌಪ್ಯಮಾಹಿತಿ ಸಂರಕ್ಷಣೆಗೆ ಮುಂದಾಗಿದೆ ಕಡಲ ತೀರದ ಅಣು ಸ್ಥಾವರ, ಸೇನಾ ನೆಲೆ ಕಟ್ಟೆಚ್ಚರದಲ್ಲಿ ಇರಿಸಲಾಗಿದೆ.