ಬೆಂಗಳೂರು,ಫೆ.12- ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿಕೊಂಡ ಆರೋಪಕ್ಕೆ ಗುರಿಯಾಗಿರುವ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬಿಬಿಎಂಪಿ ನೋಟೀಸ್ ಜಾರಿ ಮಾಡಿದೆ. ಶಾಂತಲಾ ನಗರ ವಾರ್ಡ್ ವ್ಯಾಪ್ತಿಯಲ್ಲಿರುವ ಕೆಎಸ್‍ಸಿಎ ಒಡೆತನದ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಪಕ್ಕದ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ದೂರನ್ನಾಧರಿಸಿ ಬಿಬಿಎಂಪಿ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್ ನಂಬರ್ 8 ರಿಂದ 11 ರವರೆಗಿನ ದ್ವಾರ ಇರುವ ರಸ್ತೆ ಬಿಬಿಎಂಪಿಗೆ ಸೇರಿದ್ದಾಗಿದೆ. ಆದರೆ, ಸ್ಟೇಡಿಯಂನವರು ಸಾರ್ವಜನಿಕ ರಸ್ತೆಯನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿ ರಸ್ತೆಯನ್ನು ಗುತ್ತಿಗೆ ಪಡೆದಿದೆ. ಆದರೆ, ರಸ್ತೆ ಅಭಿವೃದ್ಧಿ ಮಾಡದೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಕಾನೂನುಬಾಹಿರವಾಗಿ ಚೆಕ್‍ಪೋಸ್ಟ್ ನಿರ್ಮಾಣ ಮಾಡಿಕೊಂಡಿರುವ ಆರೋಪ ಕ್ರಿಕೆಟ್ ಸಂಸ್ಥೆ ಮೇಲಿದೆ.
ಹೀಗಾಗಿ ಸಾರ್ವಜನಿಕ ರಸ್ತೆಯನ್ನು ಖಾಸಗಿ ಸ್ವತ್ತಿನಂತೆ ಬಳಕೆ ಮಾಡಿಕೊಳ್ಳುತ್ತಿರುವ ಚಿನ್ನಸ್ವಾಮಿ ಸ್ಟೇಡಿಯಂಗೆ ಶಾಂತಿನಗರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ನೋಟೀಸ್ ಜಾರಿ ಮಾಡಿದ್ದಾರೆ.
ಸಾರ್ವಜನಿಕ ರಸ್ತೆಯಲ್ಲಿ ಚೆಕ್‍ಪೋಸ್ಟ್ ನಿರ್ಮಾಣ ಮಾಡಲು ಸಂಬಂಧಪಟ್ಟ ಸಂಸ್ಥೆಯಿಂದ ಅನುಮತಿ ಪಡೆಯಲಾಗಿದೆ ಎಂಬ ಬಗ್ಗೆ ಸೂಕ್ತ ದಾಖಲೆಗಳನ್ನು ಬಿಬಿಎಂಪಿಗೆ ಸಲ್ಲಿಸಬೇಕು. ಒಂದು ವೇಳೆ ಅನುಮತಿ ಪಡೆಯದಿದ್ದರೆ ಕೂಡಲೆ ಚೆಕ್‍ಪೋಸ್ಟ್ ತೆರವು ಮಾಡಬೇಕು. ಇಲ್ಲದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಭಿಯಂತರರು ಕೆಎಸ್‍ಸಿಎ ಅಧ್ಯಕ್ಷರಿಗೆ ನೀಡಿರುವ ನೋಟೀಸ್‍ನಲ್ಲಿ ಎಚ್ಚರಿಸಿದ್ದಾರೆ.
