ಬೆಂಗಳೂರು,ಡಿ.7- ಪರಿಶಿಷ್ಟ ಜಾತಿ ಮತ್ತು ಪಂಗಡದ 173 ಜಾತಿಗಳನ್ನು ಒಂದೇ ವೇದಿಕೆಗೆ ತಂದು, ನಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ತರಲು ಹಾಗೂ ಕಾಂಗ್ರೆಸ್ ಪಕ್ಷ ದಲಿತರೊಂದಿಗಿದೆ ಎಂಬ ಮರುಸಂದೇಶ ಸಾರಲು ಚಿತ್ರದುರ್ಗದಲ್ಲಿ ಐಕ್ಯತಾ ಸಮಾವೇಶ ನಡೆಸಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಪಕ್ಷದ ಕಚೇರಿಯಲ್ಲಿ ಹಾಕಲು ಇಚ್ಚಿಸದಿದ್ದ ಪಕ್ಷಗಳು ಇಂದು ರಾಜಕೀಯ ಲಾಭಕ್ಕಾಗಿ ದಲಿತರ ಮನವೋಲಿಕೆ ಯತ್ನ ನಡೆಸುತ್ತಿದೆ.
ದಲಿತರ ಮನೆಯಲ್ಲಿ ವಾಸ್ತವ್ಯ ಹೂಡುವುದು, ಹೋಟೆಲ್ನಿಂದ ಊಟ, ತಿಂಡಿ ತರಿಸಿಕೊಂಡು ತಿಂದು, ಮಧ್ಯ ರಾತ್ರಿ ಎದ್ದು ಬರುವ ನಾಟಕವಾಡುತ್ತಿವೆ. ಈ ಮೂಲಕ ಜನರಲ್ಲಿ ಗೊಂದಲ ಮೂಡಿಸುವ ಹುನ್ನಾರಗಳು ನಡೆಯುತ್ತಿವೆ. ಬಿಜೆಪಿ-ಜೆಡಿಎಸ್ನ ಈ ಪ್ರಹಸನಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕಿದೆ. ಅದಕ್ಕಾಗಿ ಜನವರಿ 8ರಂದು ಮಧ್ಯ ಕರ್ನಾಟಕ ಭಾಗದ ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಐಕ್ಯತಾ ಸಮಾವೇಶ ಆಯೋಜಿಸಲಾಗಿದೆ ಎಂದರು.
ಸಿದ್ರಾಮುಲ್ಲಾಖಾನ್ ನಾಮಕರಣಕ್ಕೆ ಬೇಸರವಿಲ್ಲ: ಸಿದ್ದರಾಮಯ್ಯ
ಕಾಂಗ್ರೆಸ್ ಸದಾ ದಲಿತ ಸಮುದಾಯದ ಜೊತೆಗಿತ್ತು. ದಲಿತರ ಶ್ರೇಯೋಭಿವೃದ್ಧಿ ಮತ್ತು ಶೋಷಣೆ ತಡೆಯುವ ಹಲವು ಕಾರ್ಯಕ್ರಮ, ಕಾನೂನುಗಳನ್ನು ಜಾರಿ ಮಾಡಿದೆ. ದಲಿತರಿಗಾಗಿ ಏನನ್ನು ಮಾಡದ ರಾಜಕೀಯ ಪಕ್ಷಗಳು ಇಂದು ಮತ ಗಳಿಕೆಗೆ ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿದರು.
ರಾಜ್ಯಾದ್ಯಂತ ಇರುವ ಸುಮಾರು 300ಕ್ಕೂ ಹೆಚ್ಚಿ ದಲಿತ ನಾಯಕರು ಪೂರ್ವಭಾವಿ ಸಭೆ ನಡೆಸಿ ಸಮಾವೇಶ ನಡೆಸಲು ನಿರ್ಧರಿಸಿದ್ದೇವೆ. ನಮ್ಮಲ್ಲೂ ಕೆಲ ಸಮಸ್ಯೆಗಳಿವೆ, ಅವುಗಳ ಬಗ್ಗೆ ಜನ ಸಾಮಾನ್ಯರಿಗೆ ಸ್ಪಷ್ಟ ಸಂದೇಶಗಳನ್ನು ನೀಡಬೇಕಿದೆ.
ಎಸ್ಸಿ, ಎಸ್ಟಿ ಸಮುದಾಯಗಳು ಸೇರಿದರೆ ಸುಮಾರು ಒಂದುವರೆ ಕೋಟಿ ಜನಸಂಖ್ಯೆಯಾಗಲಿದೆ. ರಾಜ್ಯದ ಆರುವರೆ ಕೋಟಿಯಲ್ಲಿ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಶೇ.24.1ರಷ್ಟಿದೆ. ಈ ಸಮುದಾಯಕ್ಕೆ ಜನಸಂಖ್ಯೆ ಆಧಾರದ ಮೇಲೆ ಬಜೆಟ್ನಲ್ಲಿ ಅನುದಾನ ಮೀಸಲಿಡುವ ಕಾನೂನನ್ನು ಸಿದ್ದರಾಮಯ್ಯಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕೈಗೊಳ್ಳಲಾಗಿದೆ ಮತ್ತು ಆ ವೇಳೆ ನಾಲ್ಕು ವರ್ಷಗಳ ಅವಗೆ 30 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿರಿಸಿ, ಖರ್ಚು ಮಾಡಲಾಗಿತ್ತು.
ನಂತರ ಬಂದ ಸಮ್ಮಿಶ್ರ ಸರ್ಕಾರ ಇದನ್ನು ಪಾಲನೆ ಮಾಡಿದೆ. ಆದರೆ ಬಿಜೆಪಿ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಟ್ಟಿಲ್ಲ. ರಾಜ್ಯ ಬಜೆಟ್ನ ಒಟ್ಟು ಗಾತ್ರ 2.63 ಲಕ್ಷ ಕೋಟಿ ರೂಪಾಯಿಗಳಾದರೆ, 42 ಸಾವಿರ ಕೋಟಿ ರೂಪಾಯಿಗಳನ್ನು ಕಾನೂನಿನ ಪ್ರಕಾರ ಮೀಸಲಿಡಬೇಕಿತ್ತು. ಆದರೆ 29 ಸಾವಿರ ಕೋಟಿ ರೂಪಾಯಿ ಮಾತ್ರ ನಿಗದಿ ಮಾಡಲಾಗಿದೆ, ಅದರಲ್ಲಿ ಖರ್ಚು ಮಾಡಿರುವುದು ಇನ್ನೂ ಕಡಿಮೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕೆಲವರು ಮೀಸಲಾತಿಯ ಬಗ್ಗೆ ಟೀಕೆ ಮಾಡುತ್ತಾರೆ. ಮೀಸಲಾತಿಯನ್ನೇ ತೆಗೆಯಬೇಕು ಎಂದು ವಾದಿಸುತ್ತಾರೆ. ಅಸ್ಪೃಶ್ಯತೆ ತೊಲಗುವವರೆಗೂ ಮೀಸಲಾತಿ ಇರಬೇಕು ಎಂಬುದು ನಮ್ಮ ವಾದ. ಮೀಸಲಾತಿ ಭಿಕ್ಷೆ ಅಲ್ಲ, ಅದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು.
ವೋಟರ್ ಡೇಟಾ ಹಗರಣ : ಇಬ್ಬರು ಐಎಎಸ್ ಅಧಿಕಾರಿಗಳಿಗೆ ಮತ್ತೆ ಡ್ರಿಲ್
ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ಪರಿಶಿಷ್ಟರಲ್ಲಿನ ಉಪ ಜಾತಿಗಳನ್ನು ಹೊಡೆದು ಲಾಭ ಪಡೆಯುವ ಬಿಜೆಪಿಯ ಯತ್ನ ವಿಫಲವಾಗಿದೆ. ನಾವೇಲ್ಲಾ ಒಟ್ಟಿಗೆ ಬಂದು ಐಕ್ಯತಾ ಸಮಾವೇಶದ ಮೂಲಕ ಸ್ಪಷ್ಟ ಸಂದೇಶ ರವಾನಿಸಲಿದ್ದೇವೆ ಎಂದರು.
ಸಿದ್ಧಾಂತ ಮರೆತವರಿಗೆ ಬಿಸಿ ಮುಟ್ಟಿಸಲು ವ್ಯೂಹ ರಚಿಸಿದ ಕಾಂಗ್ರೆಸ್
ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಸಮಾವೇಶದಲ್ಲಿ ಸುಮಾರು ಐದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಐತಿಹಾಸಿಕ ಸಮಾವೇಶ ನಡೆಸಲು ಬಹಳ ದಿನಗಳಿಂದ ಚಿಂತನೆ ಇತ್ತು. ಈಗ ಕಾಲ ಕೂಡಿ ಬಂದಿದೆ ಎಂದರು.
ಮಾಜಿ ಸಂಸದರಾದ ಚಂದ್ರಪ್ಪ , ವಿ.ಎಸ್. ಉಗ್ರಪ್ಪ, ಮಾಜಿ ಸಚಿವರಾದ ಆಂಜನೇಯ, ಎಚ್. ಸಿ.ಮಹದೇವಪ್ಪ, ಪಿ.ಟಿ.ಪರಮೇಶ್ವರ್ ನಾಯಕ್, ಪಕ್ಷದ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಧರ್ಮಸೇನಾ, ಮುಖಂಡರಾದ ಮಲ್ಲಾಜಮ್ಮ ಮತ್ತಿತರರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Chitradurga, Congress, Meeting, Parameshwar,