ಚಿಕ್ಕಬಳ್ಳಾಪುರ, ಫೆ.6- ಷಷ್ಠಿ ನಿಮಿತ್ತವಾಗಿ ಅದ್ಧೂರಿಯಾಗಿ ನಡೆಯಬೇಕಿದ್ದ ಚಿತ್ರಾವತಿ ಜಾತ್ರೆ ಕೋವಿಡ್ ಹಿನ್ನೆಲೆಯಲ್ಲಿ ಜನ ಹಾಗೂ ಜಾನುವಾರುಗಳ ಜಾತ್ರೆ ಮಾತ್ರವಲ್ಲ, ಇಂದಿನ ಕುಮಾರ ಷಷ್ಠಿ ರಥೋತ್ಸವವೂ ನಡೆಯಲಿಲ್ಲ. ಚಿಕ್ಕಬಳ್ಳಾಪುರ ಸಮೀಪದ ಚಿತ್ರಾವತಿ ಜಾತ್ರೆಯು ಪ್ರತಿ ವರ್ಷ ಮಾಘಮಾಸದ ಈ ವಾರದಲ್ಲಿ ಸಡಗರ-ಸಂಭ್ರಮದಿಂದ ನಡೆಯುತ್ತಾ ಸಹಸ್ರಾರು ಭಕ್ತರು ಷಷ್ಠಿಯ ಈ ದಿನ ರಥೋತ್ಸವವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಜಿಲ್ಲಾಡಳಿತವು ಕೋವಿಡ್ ನಿಯಂತ್ರಣದ ನೆಪವೊಡ್ಡಿ ಈ ಬಾರಿಯೂ ಇಲ್ಲಿನ ಎಲ್ಲಾ ಧಾರ್ಮಿಕ ಕೈಂಕರ್ಯಗಳನ್ನು ಸ್ಥಗಿತಗೊಳಿಸಿದೆ.
ರಾಜ್ಯದ ಸುಪ್ರಸಿದ್ಧ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವರ ಕ್ಷೇತ್ರಗಳಲ್ಲಿ ಒಂದಾಗಿರುವ ಕ್ಷೇತ್ರ ಎಂದರೆ ಅದು ತಾಲ್ಲೂಕಿನ ಚಿತ್ರಾವತಿ ಪುಣ್ಯಕ್ಷೇತ್ರ. ಮಾಘ ಮಾಸದ ಇಂದಿನ ಷಷ್ಠಿ ಪ್ರಯುಕ್ತ ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿ ದೇವಾಲಯದ ಹೊರಭಾಗದಲ್ಲಿನ ಹುತ್ತಕ್ಕೆ ಹಾಲು ಎರೆದು ಪೂಜೆ ಮಾಡುವುದು ವಾಡಿಕೆ.
ಕೊರೊನಾ ನಿಯಂತ್ರಣದ ಕಾರಣ ಈ ವರ್ಷ ಜಿಲ್ಲಾಡಳಿತ ಚಿತ್ರಾವತಿ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ನಡೆಸದಂತೆ ಆದೇಶ ನೀಡಿದ್ದ ಕಾರಣ ಈ ಆದೇಶದ ಅನ್ವಯ ಬ್ರಹ್ಮ ರಥೋತ್ಸವ ಒಳಗೊಂಡ ಜಾನುವಾರು ಹಾಗೂ ಜನ ಜಾತ್ರೆ ಸಹ ನಡೆಯದೆ ಚಿತ್ರಾವತಿಯಲ್ಲಿ ಭಕ್ತರಿಲ್ಲದೆ ನೀರವ ಮೌನ ಕಂಡುಬಂತಿತ್ತು.
ಭಕ್ತರು ಬ್ರಹ್ಮರಥೋತ್ಸವವನ್ನು ಕಣ್ತಂಬಿಕೊಳ್ಳಲು ಆಗದೆ ಜಿಲ್ಲಾಡಳಿತದ ಆದೇಶಕ್ಕೆ ಸಿಡಿಮಿಡಿಗೊಂಡರು. ತಾಲ್ಲೂಕಿನ ಶ್ರೀ ಕ್ಷೇತ್ರ ಚಿತ್ರಾವತಿಗೆ ಸುಮಾರು 300 ವರ್ಷಗಳ ಧಾರ್ಮಿಕ ಇತಿಹಾಸವಿದ್ದು, ಇಲ್ಲಿನ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ಹಾಗೂ ಅತಿ ವಿಸ್ತಾರವಾದ ವೃತ್ತಾಕಾರದ ಹಲಸೂರಮ್ಮ ಕಲ್ಯಾಣಿ ವಿಶೇಷತೆಗಳಲ್ಲಿ ವಿಶೇಷ ಪಡೆದಿದೆ.
ಜಿಲ್ಲಾಡಳಿತದ ಆದೇಶ ಏನೇ ಇದ್ದರೂ ಭಕ್ತಾದಿಗಳು ವಿರಳವಾದರೂ ಸಹ ಧಾರ್ಮಿಕತೆಗೆ ಪ್ರಾಮುಖ್ಯತೆ ಕುಂದದೆ ಕೆಲವು ಭಕ್ತರು ದರ್ಶನಕ್ಕೆ ಬಂದಿದ್ದು, ದೇವಾಲಯದ ಬಾಗಿಲು ಬಂದ್ ಆಗಿದ್ದರಿಂದ ಬಾಗಿಲಲ್ಲೇ ಪೂಜೆ ಸಲ್ಲಿಸಿ ಹೊರಗಿನಿಂದಲೇ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸುವ ಮೂಲಕ ಶ್ರೀ ಪ್ಲವನಾಮ ಸಂವತ್ಸರ ಶಿಶಿರ ಋತು ಮಾಘ ಮಾಸದ ಷಷ್ಠಿಯನ್ನು ಶ್ರದ್ಧಾಭಕ್ತಿಪೂರ್ವಕವಾಗಿ ಆಚರಿಸಿದರು.
