ಪೋಲಾರ್ಡ್ ವಿದಾಯ ನಂಬಲಾಗುತ್ತಿಲ್ಲ : ಗೇಲ್

ಕಿಂಗಸ್ಟನ್, ಏ. 21- ವೆಸ್ಟ್‍ಇಂಡೀಸ್ ಕ್ರಿಕೆಟ್‍ನ ನಾಯಕ ಕಿರಾನ್ ಪೋಲಾರ್ಡ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿರುವ ಮಾತನ್ನು ನಂಬಲೇ ಆಗುತ್ತಿಲ್ಲ ಎಂದು ಯುನಿವರ್ಸಲ್ ಬಾಸ್ ಕ್ರಿಸ್‍ಗೇಲ್ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಿನೆಡೆಡ್‍ನ ಸೋಟಕ ಆಟಗಾರ ಕಿರಾನ್ ಪೋಲಾರ್ಡ್ ಅವರು ರಾಜೀನಾಮೆ ನೀಡಿರುವ ಸುದ್ದಿ ಜೋಕ್ ಎಂದು ನಾನು ಭಾವಿಸಿದ್ದೆ, ಆದರೆ ಅವರು ನಿಜಕ್ಕೂ ಕ್ರಿಕೆಟ್ ಜೀವನದಿಂದ ವಿಶ್ರಾಂತಿ ಪಡೆದಿರುವುದು ವೆಸ್ಟ್‍ಇಂಡೀಸ್ ಕ್ರಿಕೆಟ್‍ಗೆ ದೊಡ್ಡ ನಷ್ಟ ಉಂಟಾಗಿದೆ ಎಂದು ಗೇಲ್ ಹೇಳಿದರು.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಲಾರ್ಡ್‍ರ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ಕ್ರಿಸ್ ಗೇಲ್ ಅವರು, 2007 ರಿಂದ ವೆಸ್ಟ್‍ಇಂಡೀಸ್ ಪ್ರಮುಖ ಆಟಗಾರನೆಂದು ಬಿಂಬಿಸಿಕೊಂಡು ಒಬ್ಬ ಶ್ರೇಷ್ಠ ಆಟಗಾರ, ನಾಯಕನಾಗಿಯೂ ಕೂಡ ಗಮನ ಸೆಳೆದಿದ್ದ ಅವರು ತಮ್ಮ ಸುದೀರ್ಘ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ್ದು, ಅವರ ಮುಂದಿನ ಜೀವನವು ಸುಖಕರವಾಗಿರಲೆಂದು ಗೆಳೆಯನಿಗೆ ಶುಭಾಶಯ ಕೋರಿದ್ದಾರೆ.

ಗೇಲ್ ರಾಜೀನಾಮೆ: ಪೋಲಾರ್ಡ್ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ ತರುವಾಯದಲ್ಲೇ ಯುನಿವರ್ಸಲ್ ಬಾಸ್ ಕ್ರಿಸ್‍ಗೇಲ್ ಅವರು ಕೂಡ ಶೀಘ್ರ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ.

23 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನ ಕಂಡಿರುವ ಗೇಲ್ ಅವರು ಅರಬ್ಬರ ನಾಡಿನಲ್ಲಿ ನಡೆದ ಚುಟುಕು ವಿಶ್ವಕಪ್‍ನ ನಂತರ ವೆಸ್ಟ್‍ಇಂಡೀಸ್ ತಂಡದಲ್ಲಿ ಸ್ಥಾನ ಪಡೆಯಲು ಎಡವಿದ್ದ ಗೇಲ್ ಅವರು ಈ ಬಾರಿ ಐಪಿಎಲ್‍ನಲ್ಲೂ ಆಡದೆ ದೂರ ಉಳಿದಿರುವುದರಿಂದ ಅವರು ಕೂಡ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳುವ ಸಮಯ ಬಂದಿದೆ ಎಂದು ಹೇಳಲಾಗುತ್ತಿದೆ.