ಕ್ರಿಸ್‍ಮಸ್, ಹೊಸ ವರ್ಷ ಸಂಭ್ರಮಾಚರಣೆ ಸರಳವಾಗಿರಲಿ

Spread the love

ಕೋಲಾರ,ಡಿ.22- ಸಾರ್ವಜನಿಕ ರ ಆರೋಗ್ಯದ ದೃಷ್ಟಿಯಿಂದ ಕ್ರಿಸ್‍ಮಸ್ ಹಾಗೂ ಹೊಸವರ್ಷದ ಹಬ್ಬದ ಸಂಭ್ರಮಾಚರಣೆಯನ್ನು ಸರಳವಾಗಿ, ಮತ್ತು ಅರ್ಥಗರ್ಭಿತವಾಗಿ ಆಚರಿಸುವ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ಜಿಲ್ಲಾದ್ಯಂತ ಸಾಮಾಜಿಕ ಅಂತರವಿಲ್ಲದೇ ಹೆಚ್ಚಿನ ಜನರು ಸೇರುವ ಸಾಮೂಹಿಕ ಕೂಟಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಹೆಚ್ಚು ಜನಸಂಖ್ಯೆಯುಳ್ಳ ವಸತಿ ಸಮುಚ್ಚಯಗಳಲ್ಲಿ ಹಾಗೂ ಜನ ಸೇರತಕ್ಕಂತ ಸ್ಥಳಗಳಲ್ಲಿ ಆಯೋಜಿಸುವುದು, ಆಚರಣೆ ನಡೆಸುವುದನ್ನು ಸಂರ್ಪೂಣವಾಗಿ ನಿಷೇಧಿಸಲಾಗಿದೆ ಎಂದು ಅವರು ಆದೇಶ ಹೊರಡಿಸಿದ್ದಾರೆ.

ಕ್ರೈಸ್ತ ಧರ್ಮದ ಚರ್ಚ್‍ಗಳಲ್ಲಿ ಒಮ್ಮೆಲೆ ಹೆಚ್ಚು ಜನರು ಸೇರದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮೇಲ್ವಿಚಾರಕರು ಅಥವಾ ಆಯೋಜಕರು ಕಟ್ಟುನಿಟ್ಟಿನ ಕ್ರಮ ವಹಿಸತಕ್ಕದ್ದು. ಹಬ್ಬದ ಆಚರಣೆಯ ಸಂದರ್ಭದಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು ತಡೆಗಟ್ಟಲು ಸಾರ್ವಜನಿಕರ ಹಸ್ತಲಾಘವ ಮತ್ತು ಆಲಿಂಗನವನ್ನು ನಿಷೇಧಿಸಿದೆ.

ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ಕ್ಲಬ್, ಪಬ್, ರೆಸ್ಟೋರೆಂಟ್ ಹಾಗೂ ಅದೇ ತೆರನಾದ ಸ್ಥಳ ಅಥವಾ ಪ್ರದೇಶಗಳಲ್ಲಿ ಸಾಮಾಜಿಕ ಅಂತರವಿಲ್ಲದೇ ಹೆಚ್ಚು ಜನರು ಸೇರುವ ವಿಶೇಷ ಯೋಜಿತ ಒಟ್ಟುಗೂಡುವಿಕೆ, ವಿಶೇಷ ಡಿಜೆ-ಡಾನ್ಸ್ ಕಾರ್ಯಕ್ರಮಗಳನ್ನು, ವಿಶೇಷ ಪಾರ್ಟಿ, ಇತ್ಯಾದಿ ನಿಷೇಧಿಸಲಾಗಿದೆ. ಆದರೆ ಈ ಸ್ಥಳಗಳಲ್ಲಿ ಪ್ರತಿನಿತ್ಯ ಸಾಮಾನ್ಯ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಬಂಧವಿಲ್ಲ ಎಂದು ಅವರು ಹೇಳಿದರು.

ಬಹು ಮುಖ್ಯವಾಗಿ 65 ವರ್ಷ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರತಕ್ಕದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಹೋಟೆಲ್‍ಗಳು, ಮಾಲ್‍ಗಳು, ಪಬ್, ರೆಸ್ಟೋರೆಂಟ್‍ಗಳು ಹಾಗೂ ಅಂತಹ ಸ್ಥಳ, ಪ್ರದೇಶಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಇರಿಸತಕ್ಕದ್ದು.

ಹೋಟೆಲ್‍ಗಳು, ಮಾಲ್‍ಗಳು, ಪಬ್, ರೆಸ್ಟೋರೆಂಟ್‍ಗಳು ಹಾಗೂ ಅಂತಹ ಸ್ಥಳ, ಪ್ರದೇಶಗಳಲ್ಲಿ ಅದರ ಮಾಲೀಕರು ಕಡ್ಡಾಯವಾಗಿ ಸರ್ಕಾರದ ಆದೇಶದಂತೆ ಕೋವಿಡ್-19ರ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರದಿಂದ ಜನರು ಸೇರಲು ಜಾಗ್ರತೆ ವಹಿಸುವುದು ಎಂದು ಹೇಳಿದರು. ಈ ಮಾರ್ಗಸೂಚಿಗಳು ಡಿಸೆಂಬರ್ 20 ರಿಂದ ಜನವರಿ 2, 2021 ರವರೆಗೆ ಚಾಲ್ತಿಯಲ್ಲಿರುತ್ತದೆ. ಯಾವುದೇ ವ್ಯಕ್ತಿ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗವುದು ಎಂದು ಅರು ತಿಳಿಸಿದ್ದಾರೆ.

Facebook Comments