ಚುಂಚನಕಟ್ಟೆಯಲ್ಲಿ ಕೊಚ್ಚಿಹೋಗಿದ್ದ ವಿಜ್ಞಾನಿ ಮೃತದೇಹ ಪತ್ತೆ

Mysuru-Scintist

ಕೆ.ಆರ್.ನಗರ, ಜೂ.4- ಪ್ರವಾಸಕ್ಕೆ ತೆರಳಿದ್ದ ವೇಳೆ ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಮೈಸೂರಿನ ಸಿಎಫ್‍ಟಿಆರ್‍ಐನ ಹಿರಿಯ ವಿಜ್ಞಾನಿಯ ಮೃತ ದೇಹವನ್ನು ಹೊರತೆಗೆಯಲಾಗಿದೆ. ಸಿಎಫ್‍ಟಿಆರ್‍ಐನ ಹಿರಿಯ ವಿಜ್ಞಾನಿ ಹರಿಯಾಣ ಮೂಲದ ಸೋಮಶೇಖರ್ (42) ಮೃತ ದುರ್ದೈವಿ.
ನಿನ್ನೆ ಬೆಳಗ್ಗೆ ರಜಾ ದಿನವಾದ್ದರಿಂದ ಪತ್ನಿ ಪ್ರತಿಮಾ ಮತ್ತು ಮಕ್ಕಳೊಂದಿಗೆ ಹತ್ತಿರದ ಚುಂಚನಕಟ್ಟೆಗೆ ವಿಹಾರಕ್ಕೆ ತೆರಳಿದ್ದರು.

ಈ ವೇಳೆ ಬಂಡೆಗಳ ಮೇಲೆ ನಡೆಯುತ್ತಾ ನದಿಯ ಮಧ್ಯೆ ಹೋಗಿದ್ದಾಗ ನದಿ ದಂಡೆಯಲ್ಲಿರುವ ಗ್ರಾಫೈಟ್ ಆಫ್ ಇಂಡಿಯಾ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ನದಿಗೆ ದಿಢೀರ್ ನೀರು ಹರಿಯಬಿಟ್ಟಿದ್ದಾರೆ. ಆಗ ಬಂಡೆ ಮೇಲಿದ್ದ ಇವರ ಕುಟುಂಬ ನೀರಿನ ಸೆಳೆತಕ್ಕೆ ಸಿಲುಕಿದೆ. ಇದನ್ನು ಗಮನಿಸಿದ ನದಿ ದಂಡೆಯಲ್ಲಿದ್ದ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಪ್ರತಿಮಾ ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ಅಷ್ಟರಲ್ಲಾಗಲೇ ನದಿಯ ನೀರಿನ ರಭಸ ಹೆಚ್ಚಾಗಿದ್ದರಿಂದ ಸೋಮಶೇಖರ್ ಅವರನ್ನು ಕಾಪಾಡಲು ಮಾಡಿದ ಪ್ರಯತ್ನ ಫಲಿಸಲಿಲ್ಲ. ನೀರಿನ ರಭಸದಲ್ಲಿ ಸೋಮಶೇಖರ್ ಕೊಚ್ಚಿ ಹೋಗಿದ್ದರು.

ಪ್ರತಿ ಬಾರಿ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ನೀರು ಹರಿಯ ಬಿಡುವ ಮುನ್ನ ಸೈರನ್ ಮೊಳಗಿಸಲಾಗುತ್ತದೆ. ಆದರೆ, ನಿನ್ನೆ ಸೈರನ್ ಶಬ್ಧ ಕೇಳಿಸದೇ ಇದುದ್ದರಿಂದ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಕೆ.ಆರ್.ನಗರ ಠಾಣೆ ಪಿ.ಎಸ್.ಐ ಶಿವಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೋಮಶೇಖರ್ ಮೃತದೇಹವನ್ನು ಮೀನುಗಾರರು ಹಾಗೂ ನುರಿತ ಈಜುಗಾರರ ಸಹಾಯದಿಂದ ಹೊರ ತೆಗೆಯಲಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.

Sri Raghav

Admin