ಮಿಂಚಿ ಮರೆಯಾದ ನಕ್ಷತ್ರಗಳು..!

2020…. ಈ ವರ್ಷ ಬಲು ಕಾರಳ ಎಂದರೆ ಅತಿಶಯೋಕ್ತಿಯಲ್ಲ, ವರ್ಷದ ಆರಂಭದಿಂದಲೂ ಎಲ್ಲಾ ರಂಗಗಳಲ್ಲೂ ಸಾಕಷ್ಟು ಅವಘಡಗಳು ಸಂಭ ವಿಸಿವೆ. ಇದರಿಂದ ಚಿತ್ರರಂಗವು ಹೊರತಾಗಿಲ್ಲ. ಈ ವರ್ಷ ಆರಂಭಗೊಂಡ ಬಹುತೇಕ ನಿರೀಕ್ಷಿತ ಚಿತ್ರಗಳೇ ಸೋಲಿನ ಹೊಡೆತ ನೀಡಿದ್ದರೆ, ಇನ್ನು ಕೆಲವು ಚಿತ್ರಗಳು ಸಿನಿಮಾ ರಂಗಕ್ಕೆ ಹೊಸ ಚೈತನ್ಯ ನೀಡುತ್ತದೆ ಎಂದು ಅಂದಾಜಿಸುತ್ತಿದ್ದಾಗಲೇ ಕೊರೊನಾ ಮಹಾಮಾರಿ ಇಡೀ ಸಿನಿಜಗತ್ತನ್ನೇ ದಿಗ್ಭ್ರಮೆಗೊಳಿಸಿದೆ.

ಮೊದಲೇ ಚಿತ್ರಗಳ ಸೋಲಿನಿಂದ ಕಂಗೆಟ್ಟಿದ್ದ ಸಿನಿರಂಗಕ್ಕೆ ಸಾವಿನ ಸರಮಾಲೆಗಳು ಕೂಡ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ. ಸ್ಯಾಂಡಲ್‍ವುಡ್ ಮಾತ್ರವಲ್ಲ ಬಾಲಿವುಡ್‍ನಲ್ಲೂ ಈ ದುಃಖವು ಮಡುಗಟ್ಟಿದೆ.  ತಮ್ಮ ಹಾಸ್ಯದಿಂದಲೇ ಗಮನ ಸೆಳೆದಿದ್ದ ಬುಲೆಟ್ ಪ್ರಕಾಶ್ ಬಣ್ಣದ ಆಟವನ್ನು ನಿಲ್ಲಿಸಿದ್ದು ಕನ್ನಡ ಚಿತ್ರರಂಗದವರ ಮನಸ್ಸನ್ನು ಘಾಸಿಗೊಳಿಸಿತು. ಎಕೆ 47 ಚಿತ್ರದಿಂದ ಸಿನಿಮಾ ಯಾನ ಆರಂಭಿಸಿದ ಬುಲೆಟ್ ತಮ್ಮ ದೇಹದಾಕೃತಿಯಿಂದ ಪ್ರೇಕ್ಷರನ್ನು ನಕ್ಕು ನಲಿಸುತ್ತಿದ್ದರು.

ಚಂದನವನದ ಬಹುತೇಕ ಸ್ಟಾರ್ ನಟರುಗಳೆಲ್ಲರೊಂದಿಗೆ ನಟಿಸಿರುವ ಬುಲೆಟ್ ಜರ್ಕ್ ಚಿತ್ರದಲ್ಲಿ ಅಂತಿಮವಾಗಿ ಬಣ್ಣ ಹಚ್ಚಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ಏಪ್ರಿಲ್ 6 ರಂದು ತಮ್ಮ ಬುಲೆಟ್‍ನ ವೇಗವನ್ನು ನಿಲ್ಲಿಸಿ ಬಾರದ ಲೋಕಕ್ಕೆ ಹೊರಟುಹೋದರು. ಬುಲೆಟ್ ಪ್ರಕಾಶ್ ಸಾವನ್ನಪ್ಪಿದ ದುಃಖ ಮರೆಯಾಗುವ ಮುನ್ನವೇ ಮತ್ತೊಬ್ಬ ಹಾಸ್ಯನಟ ಮೈಕಲ್ ಮಧು ಸಾವು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್ ನೀಡಿತು.

ಮೂಲತಃ ಡ್ಯಾನ್ಸರ್ ಆಗಿದ್ದ ಮೈಕಲ್ ಮಧು, ಬಹುತೇಕ ಚಿತ್ರಗಳಲ್ಲಿ ಭಿಕ್ಷುಕನ ಪಾತ್ರದಿಂದಲೇ ಗುರುತಿಸಿಕೊಂಡಿದ್ದ ಮಧು, ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಕುಮಾರ್‍ಬಂಗಾರಪ್ಪ ನಟನೆಯ ಅಶ್ವಮೇಧ ಚಿತ್ರದಿಂದ. ನಂತರ ಓಂ, ಶ್, ಸೂರ್ಯವಂಶ ಮುಂತಾದ ಚಿತ್ರಗಳಲ್ಲಿ ನಗೆಯ ಚೆಲುಮೆ ಚಿಮ್ಮಿಸಿ ಪ್ರೇಕ್ಷಕರನ್ನು ರಂಜಿಸಿದ್ದ ಮಧು ಮೇ 13 ರಂದು ಹೃದಯಾಘಾತದಿಂದ ವಿಧಿವಶರಾದರು.

ಬುಲೆಟ್ ಪ್ರಕಾಶ್, ಮೈಕಲ್‍ಮಧುರ ಸಾವಿನ ನಂತರ ಸ್ಯಾಂಡಲ್‍ವುಡ್ ಅನ್ನು ಅಕ್ಷರಶಃ ಬೆಚ್ಚಿ ಬೀಳಿಸಿದ್ದು. ಹೃದಯಾಘಾತದಿಂದ ಸಾವನ್ನಪ್ಪಿದ ಯುವ ನಟ ಚಿರಂಜೀವಿ ಸರ್ಜಾರ ಸುದ್ದಿ. ಮಾವ ಅರ್ಜುನ್‍ಸರ್ಜಾರೊಂದಿಗೆ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಚಿರು, ವಾಯುಪುತ್ರ ಚಿತ್ರದ ಮೂಲಕ ಹೀರೋ ಆಗಿ ಬೆಳಕಿಗೆ ಬಂದರು. ಆ ಚಿತ್ರವು ಯಶಸ್ವಿ ಆಗದಿದ್ದರೂ ಕೂಡ ಕನ್ನಡಕ್ಕೊಬ್ಬ ಆ್ಯಂಗ್ರಿ ಯಂಗ್ ಹೀರೋ ಸಿಕ್ಕ ಎಂಬ ಭರವಸೆ ಮೂಡಿಸಿದ್ದರು. ಆದರೆ ಜೂ.7ರಂದು ಚಿರು ಚಿರನಿದ್ರೆಗೆ ಜಾರಿದ್ದಾರೆ.

ಚಿರು ಚಿತ್ರವು ಚಿರಂಜೀವಿ ಸರ್ಜಾಗೆ ಗೆಲುವಿನ ಓಟವನ್ನು ನೀಡಿದ ನಂತರ ಗಂಡೆದೆ, ದಂಡಂ ದಶಗುಣಂ, ವಿಜಿಲ್, ಕೆಂಪೇಗೌಡ, ವರದನಾಯಕ ಮುಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ಸ್ಯಾಂಡಲ್‍ವುಡ್‍ನ ಬಲು ಬೇಡಿಕೆಯ ನಟನಾಗಿ ರೂಪುಗೊಂಡಿದ್ದರು.

ಚಿರು ನಟಿಸಿದ್ದ ಶಿವಾರ್ಜುನ ಚಿತ್ರವು ಅವರಿಗೆ ಮತ್ತೊಂದು ಬ್ರೇಕ್ ನೀಡುತ್ತದೆ ಎಂದು ಅಂದಾಜಿಸುವಾಗಲೇ ಕೊರೊನಾ ಕಾಟ ಎದುರಾಯಿತು. ತಮ್ಮ ಕುಟುಂಬದ ಮುದ್ದಿನ ಕಣ್ಮಣಿ ಆಗಿದ್ದ ಚಿರು, ತಂದೆಯಾಗುವ ಸಂಭ್ರಮದಲ್ಲಿರುವಾಗಲೇ ಅವರ ಸಾವು ಅವರ ಕುಟುಂಬಕ್ಕೆ ಹಾಗೂ ಚಿತ್ರರಂಗವನ್ನು ದುಃಖದ ಮಡುವಿನಲ್ಲಿ ಮುಳುಗುವಂತೆ ಮಾಡಿದೆ.

ಒಂದು ದಶಕದ ಕಾಲ ಚಿತ್ರರಂಗವನ್ನಾಳಿದ ಚಿರು 22ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಬಲು ಬೇಡಿಕೆಯ ನಟನೆಂದು ಗುರುತಿಸಿಕೊಂಡಿದ್ದಾರೆ. ಚಿರಂಜೀವಿ ಸರ್ಜಾ ರಾಜಾಮರ್ತಾಂಡ, ಏಪ್ರಿಲ್, ರಣಂ, ಕ್ಷತ್ರಿಯ ಚಿತ್ರಗಳಲ್ಲಿ ಬ್ಯುಜಿಯಾಗಿದ್ದಾಗಲೇ ಬಾರದ ಲೋಕಕ್ಕೆ ಮರಳಿದ್ದಾರಾದರೂ ಅವರ ನೆನಪು ಸದಾ ಹಸಿರಾಗಿರುತ್ತದೆ.

ಬಾಲಿವುಡ್‍ನ ಕಲಾ ಕುಟುಂಬವೆಂದೇ ಗುರುತಿಸಿಕೊಂಡಿದ್ದ ಕಪೂರ್ ಫ್ಯಾಮಿಲಿಗೂ ಈ ವರ್ಷ ಸಾವಿನ ದುಃಖವನ್ನು ತರಿಸಿದೆ. ತಂದೆ ರಾಜ್‍ಕಪೂರ್‍ರ ಶ್ರೀ 420, ಮೇರೆ ನಾಮ್ ಜೋಕರ್ ಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಬಂದು ಬಾಬಿ ಚಿತ್ರದ ಮೂಲಕ ಲವ್ಲಿ ನಟನೆಂದೇ ಬಿಂಬಿಸಿಕೊಂಡ ರಿಷಿಕಪೂರ್ 70-90ರ ದಶಕದವರೆಗೂ ಬಾಲಿವುಡ್‍ನ ಬಲು ಬೇಡಿಕೆಯ ನಟನೆಂದೇ ಬಿಂಬಿಸಿಕೊಂಡಿದ್ದರು.

ಕಲೆಯನ್ನೇ ಬದುಕಾಗಿಸಿಕೊಂಡು ಪುತ್ರನನ್ನು ಸಿನಿಮಾರಂಗಕ್ಕೆ ಪರಿಚಯಿಸಿದ್ದ ರಿಷಿಕಪೂರ್ ಬದುಕಿನವರೆಗೂ ಬಣ್ಣದ ಲೋಕವನ್ನೇ ಉಸಿರಾಗಿಸಿಕೊಂಡಿದ್ದರು. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ರಿಷಿ ಕೊನೆಗೂ 30 ಏಪ್ರಿಲ್ 2020ರಂದು ಇಹಲೋಕದ ಯಾತ್ರೆ ಮುಗಿಸಿ ಬಾಲಿವುಡ್ ಅನ್ನು ಶೋಕದ ಮಡುವಿನಲ್ಲಿ ಮುಳುಗುವಂತೆ ಮಾಡಿದ್ದರು.

ಸಲಾಮ್ ಮುಂಬೈ ಎನ್ನುತ್ತಾ ಬಾಲಿವುಡ್‍ಗೆ ಎಂಟ್ರಿ ಕೊಟ್ಟ ಪ್ರಬುದ್ಧ ನಟ ಇರ್ಫಾನ್‍ಖಾನ್ ಕೂಡ ಕ್ಯಾನ್ಸರ್‍ನಿಂದಲೇ 29 ಏಪ್ರಿಲ್ 2020ರಲ್ಲಿ ಇಹಲೋಕ ಯಾತ್ರೆ ಮುಗಿಸಿದರೆ, ಮೇ 31ರಂದು ದಬಾಂಗ್ ಸಿನಿಮಾದ ಖ್ಯಾತ ಸಂಗೀತ ನಿರ್ದೇಶಕ ವಾಜಿದ್‍ಖಾನ್ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪುವ ಮೂಲಕ ಬಾಲಿವುಡ್ ಮಂದಿಗೆ ಶಾಕ್ ನೀಡಿದರು.

ಇನ್ನು ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫುವಿನ ಮೂಲಕ ಬೆಳಕಿಗೆ ಬಂದಿದ್ದ ಮಬಿನಾ ಮೈಕಲ್, ನಿರೂಪಕ ಸಂಜೀವ ಕುಲಕರ್ಣಿ, ಹಿರಿಯ ನಟಿ ಕಿಶೋರಿಬಲ್ಲಾಳ್ ಜೀವನದ ಯಾತ್ರೆ ಮುಗಿಸಿದ್ದು ಕೂಡ 2020ರಲ್ಲೇ.  ಇನ್ನೂ ಅರ್ಧ ವಾರ್ಷಿಕ ಮುಗಿಯುವ ಮುಂಚೆಯೇ ಈ ರೀತಿ ದುರ್ಘಟನೆಗಳು ನಡೆದಿದೆ. ಮುಂದಾದರೂ ಚಿತ್ರರಂಗಕ್ಕೆ ಇಂತಹ ಕರಾಳ ಛಾಯೆ ಮೂಡದಿರಲಿ.