ದೇವಸ್ಥಾನಗಳಿಗೆ ನೀಡಿದ್ದ ‘ಗಂಟೆ’ ಸುತ್ತೋಲೆ ಹಿಂಪಡೆದ ಧಾರ್ಮಿಕ ದತ್ತಿ ಇಲಾಖೆ

Social Share

ಬೆಂಗಳೂರು,ಫೆ.16- ದೇವಸ್ಥಾನಗಳಲ್ಲಿ ಜಾಗಟೆ, ಗಂಟೆ, ಶಂಖ ಊದುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂಬ ಸುತ್ತೋಲೆಯನ್ನು ಧಾರ್ಮಿಕ ದತ್ತಿ ಇಲಾಖೆಯು ತನ್ನ ಆದೇಶವನ್ನು ಹಿಂಪಡೆದಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ವಿಧಾನಸಭೆಗೆ ತಿಳಿಸಿದರು.
ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕರಾದ
ಸಿ.ಟಿ.ರವಿ ಮತ್ತು ರವಿಸುಬ್ರಹ್ಮಣ್ಯ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಈಗಾಗಲೇ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು. ಯಾವ ಧಾರ್ಮಿಕ ಕೇಂದ್ರಗಳಲ್ಲಿ ಮುಂಜಾನೆ ಈ ರೀತಿಯ ಶಬ್ದ ಉಂಟಾಗುತ್ತಿತ್ತೋ ಅಂತಹ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ನೋಟಿಸ್ ನೀಡಲಾಗಿತ್ತು.
ಇದು ಯಾವುದೇ ಒಂದು ಧರ್ಮ ಅಥವಾ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ನೋಟಿಸ್ ನೀಡಿರಲಿಲ್ಲ. ಇದರಿಂದ ಕೆಲವು ಗೊಂದಲ ಉಂಟಾಗಿದ್ದರಿಂದ ಈಗ ಆದೇಶವನ್ನು ಹಿಂಪಡೆಯಲಾಗಿದೆ ಎಂದರು.
ಇದಕ್ಕೂ ಮುನ್ನ ಸಿ.ಟಿ.ರವಿ ಮಾತನಾಡಿ, ಸಾವಿರಾರು ವರ್ಷಗಳಿಂದ ದೇವಸ್ಥಾನ ಮತ್ತು ಮನೆಗಳಲ್ಲಿ ಪೂಜೆ, ಪುನಸ್ಕಾರ ಮಾಡುವಾಗ ಶಂಖ ಊದುವುದು, ಗಂಟೆ ಬಾರಿಸುವುದು, ಜಾಗಟೆ ಬಾರಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ಸಾವಿರಾರು ವರ್ಷಗಳಿಂದಲೂ ಈ ಬಗ್ಗೆ ಯಾರೂ ಕೂಡ ತಕರಾರು ತೆಗೆದಿರಲಿಲ್ಲ. ಈಗ ಏಕಾಏಕಿ ಆಕ್ಷೇಪ ಇದೆ. ಇದರ ಹಿಂದೆ ಯಾವುದಾದರೂ ಪಿತೂರಿ ಇದೆಯೇ ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಶಾಸಕ ರವಿ ಸುಬ್ರಹ್ಮಣ್ಯ, ದೊಡ್ಡ ಗಣಪತಿ ದೇವಸ್ಥಾನ ಸೇರಿದಂತೆ ಮತ್ತಿತರ ದೇವಸ್ಥಾನಗಳಿಗೆ ಕೆಲವು ಅಕಾರಿಗಳು ಏಕಾಏಕಿ ಬಂದು ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ನೋಟಿಸ್ ಕೊಟ್ಟಿದ್ದಾರೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡಿದಿತ್ತೇ ಎಂದು ಪ್ರಶ್ನಿಸಿದರು.

Articles You Might Like

Share This Article