ರಾಷ್ಟ್ರಪತಿ ದ್ರೌಪದಿ ಮುರ್ಮು ಪೌರ ಸನ್ಮಾನಕ್ಕೆ ಹುಬ್ಬಳ್ಳಿಯಲ್ಲಿ ಸಕಲ ಸಿದ್ಧತೆ

Social Share

ಹುಬ್ಬಳ್ಳಿ,ಸೆ.21- ಇಡೀ ದೇಶಕ್ಕೆ ಶಾಂತಿಯ ಸಂದೇಶ ಸಾರುವ ನಾಡು, ವಾಣಿಜ್ಯ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹುಬ್ಬಳ್ಳಿಯಲ್ಲಿ ದೇಶದ ಪ್ರಥಮ ಪ್ರಜೆ ದ್ರೌಪದಿ ಮುರ್ಮು ಅವರನ್ನು ಅಭಿನಂದಿಸಲು ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತ್ತಿದೆ.
ಸುಮಾರು ಮೂರುವರೆ ದಶಕಗಳ ಬಳಿಕ ರಾಷ್ಟ್ರಪತಿಯವರಿಗೆ ಪೌರಸನ್ಮಾನ ನೀಡುತ್ತಿದ್ದು, ಎರಡನೇ ಬಾರಿಗೆ ರಾಷ್ಟ್ರದ ಪ್ರಥಮ ಪ್ರಜೆಗೆ ಪೌರಸನ್ಮಾನ ಮಾಡುವ ಭಾಗ್ಯವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪಡೆದುಕೊಂಡಿದೆ ಎಂಬುದು ಹೆಮ್ಮೆ ಮೂಡಿಸಿದೆ.

ಸೆ.26ರಂದು ಆಗಮಿಸುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ಸಲ್ಲಿಸಲು ದೇಶಪಾಂಡೆ ನಗರದ ಕರ್ನಾಟಕ ಜಿಮ್
ಖಾನಾ ಕ್ಲಬ್ ಶೃಂಗಾರ ಗೊಳ್ಳುತ್ತಿದೆ. ರಾಜ್ಯ-ದೇಶ, ವಿದೇಶಗಳ ಅತ್ಯುನ್ನತ ಸ್ಥಾನದಲ್ಲಿದ್ದವರು, ಮೇರು ಕಲಾವಿದರು, ಯೋಧರು, ಸಾಧಕರಿಗೆ ಮಹಾನಗರದ ಜನತೆಯ ಪರವಾಗಿ ಪಾಲಿಕೆ ಪೌರಸನ್ಮಾನ ಈ ಸನ್ಮಾನ ಸಲ್ಲಿಕೆಯಾಗುತ್ತದೆ.

ಪಾಲಿಕೆ ಅಸ್ತಿತ್ವಕ್ಕೆ ಬಂದ 60 ವರ್ಷಗಳಿಂದ ಹಲವು ಗಣ್ಯರು, ಕಲಾವಿದರು, ಸಾಧಕರಿಗೆ ಪೌರಸನ್ಮಾನ ಸಲ್ಲಿಸುತ್ತ ಬಂದಿದೆ. ದೇಶದ ಎರಡನೇ ಮಹಿಳಾ ಮತ್ತು ಬುಡಕಟ್ಟು ಸಮುದಾಯದಿಂದ ಮೊದಲ ರಾಷ್ಟ್ರಪತಿ ಆಗಿರುವ ದ್ರೌಪದಿ ಮುರ್ಮು ಈ ಪೌರಸನ್ಮಾನಕ್ಕೆ ಭಾಜನರಾಗುತ್ತಿದ್ದಾರೆ.

ಇದನ್ನೂ ಓದಿ : BREAKING : ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ವಿಧಿವಶ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿಶೇಷ ಮುತುವ ರ್ಜಿಯೊಂದಿಗೆ ರಾಷ್ಟ್ರಪತಿಯವರಿಗೆ ಪೌರ ಸನ್ಮಾನದ ಅವಕಾಶ ಹು-ಧಾ ಮಹಾನಗರ ಪಾಲಿಕೆಗೆ ಲಭ್ಯವಾಗಿದೆ. ಐಐಐಟಿ ಉದ್ಘಾಟನೆಗೆ ಸೆ.26ರಂದು ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ಆಗಮಿಸುವ ರಾಷ್ಟ್ರಪತಿಯವರಿಗೆ ಅಂದು ಬೆಳಗ್ಗೆ 11ಗಂಟೆಗೆ ಪೌರಸನ್ಮಾನ ನಡೆಯಲಿದೆ.

1986-87ರಲ್ಲಿ ಗ್ಯಾನಿ ಜೇಲ್‍ಸಿಂಗ್ ಅವರು ಹುಬ್ಬಳ್ಳಿಗೆ ಭೇಟಿ ನೀಡಿದ್ದಾಗ ಪಾಲಿಕೆಯಿಂದ ಪೌರಸನ್ಮಾನ ನೀಡಲಾಗಿತ್ತು. ಸುಮಾರು 35 ವರ್ಷಗಳ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ರಸ್ತೆ ಸ್ವಚ್ಛತೆ ಸೇರಿದಂತೆ ಹಲವು ತಯಾರಿಗಳು ಹಗಲು-ರಾತ್ರಿ ಎನ್ನದೆ ನಡೆಯುತ್ತಿವೆ.

ಗೋಕುಲ ರಸ್ತೆ ಸ್ವಚ್ಛಗೊಳಿಸುವ, ಪೇಂಟಿಂಗ್ ಮೂಲಕ ಅಂದಗೊಳಿಸುವ ಕಾರ್ಯ ಒಂದೆಡೆಯಾದರೆ, ಪೌರಸನ್ಮಾನ ನಡೆಯುವ ದೇಶಪಾಂಡೆ ನಗರದ ಮೈದಾನ ಬಳಿಯ ರಾಜಕಾಲುವೆ ಸ್ವಚ್ಛತೆ, ಇನ್ನಿತರ ದುರಸ್ತಿ ಕಾರ್ಯವೂ ಭರದಿಂದ ಸಾಗಿದೆ.

ಐದನೇ ರಾಷ್ಟ್ರಪತಿ; ದ್ರೌಪದಿ ಮುರ್ಮು ಅವರು ಧಾರವಾಡ ಜಿಲ್ಲೇಗೆ ಭೇಟಿ ನೀಡುತ್ತಿರುವ ಐದನೇ ರಾಷ್ಟ್ರಪತಿ. ಈ ಮೊದಲು ದೇಶದ ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್, ಗ್ಯಾನಿ ಜೇಲ್‍ಸಿಂಗ್, ಡಾ.ಅಬ್ದುಲ್ ಕಲಾಂ, ಪ್ರಣವ್ ಮುಖರ್ಜಿ ಅವರು ಆಗಮಿಸಿದ್ದರು. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದಾರೆ.

ರಜತ ಸಂಭ್ರಮದಲ್ಲಿ: ಗ್ಯಾನಿ ಜೇಲ್‍ಸಿಂಗ್ ಅವರು ಧಾರವಾಡದ ಕೃಷಿ ವಿವಿಗೆ ಆಗಮಿಸಿದ್ದಾಗ ಅವರಿಗೆ ಇಲ್ಲಿನ ರೈಲ್ವೆ ಮೈದಾನದಲ್ಲಿ ಪೌರ ಸನ್ಮಾನ ಕೈಗೊಳ್ಳಲಾಗಿತ್ತು. ಪಿ.ಎಚ್. ಪವಾರ ಮಹಾ ಪೌರರಾಗಿದ್ದರು. ಎಸ್.ಆರ್.ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಮಹಾನಗರ ಪಾಲಿಕೆ ರಜತಮಹೋತ್ಸವ ಸಂಭ್ರಮದಲ್ಲಿತ್ತು.

ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರಿಗೂ ಸಹ ಪಾಲಿಕೆಯಿಂದ ಪೌರಸನ್ಮಾನ ಕೈಗೊಳ್ಳಲಾಗಿತ್ತು. ಅವರಿಗೆ ಗೋಲ್ಡನ್ ಕೀ ನೀಡುವ ಮೂಲಕ ಉತ್ತರ ಕರ್ನಾಟಕದ ಹೆಬ್ಟಾಗಿಲು ಹುಬ್ಬಳ್ಳಿಗೆ ಸ್ವಾಗತ ಎಂದು ಕೋರಲಾಗಿತ್ತು. 1997ರಲ್ಲಿ ಡಾ.ರಾಜಕುಮಾರ್ ಅವರಿಗೆ ನೆಹರು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರಸನ್ಮಾನ ಮಾಡಲಾಗಿತ್ತು. ಅದೇ ರೀತಿ ಹಿಂದೂಸ್ತಾನಿ ಗಾಯಕಿ ಡಾ.ಗಂಗೂಬಾಯಿ ಹಾನಗಲ್ಲ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಬಂದ ಸಂದರ್ಭದಲ್ಲೂ ಅವರಿಗೆ ಪೌರಸನ್ಮಾನ ಮಾಡಿರುವುದು ಇಲ್ಲಿನ ವಿಶೇಷ.

65 ನಿಮಿಷ ಕಾರ್ಯಕ್ರಮ:
ರಾಷ್ಟ್ರಪತಿಗಳ ಪೌರಸನ್ಮಾನಕ್ಕಾಗಿ ಈ ಬಾರಿ ದೇಶಪಾಂಡೆ ನಗರದ ಮೈದಾನ ಸಜ್ಜುಗೊಳ್ಳುತ್ತಿದೆ. ಪಾಲಿಕೆ ಸುಮಾರು 5,000 ಆಹ್ವಾನ ಪತ್ರಿಕೆ ಮುದ್ರಣ ಮಾಡುತ್ತಿದ್ದು, 3,500ರಿಂದ 4,000 ಆಸನ ವ್ಯವಸ್ಥೆ ಮಾಡುತ್ತಿದೆ. ಕಾರ್ಯಕ್ರಮ 65 ನಿಮಿಷ ದವರೆಗೆ ನಡೆಯಲಿದೆ. ರಾಷ್ಟ್ರಪತಿವರಿಗೆ ಸದ್ಗುರು ಸಿದ್ಧಾರೂಢಸ್ವಾಮಿ ಯವರ 800-900 ಗ್ರಾಂ ತೂಕದ ಬೆಳ್ಳಿ ಮೂರ್ತಿ ಹಾಗೂ ಪೌರಸನ್ಮಾನ ಪತ್ರ ನೀಡಲಾಗುತ್ತದೆ.

ವೇದಿಕೆ ಮೇಲೆ ರಾಷ್ಟ್ರಪತಿಯವರು ಸೇರಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತ್ರ ಮಾತನಾಡಲು ಅವಕಾಶ ನೀಡಲು ನಿರ್ಧರಿಸಲಾಗಿದೆ.

Articles You Might Like

Share This Article