ನವದೆಹಲಿ, ಆ.25- ಅಕ್ರಮ ಹಣದ ವರ್ಗಾವಣೆ ಪ್ರಕರಣದಲ್ಲಿ ಆರೋಪಿತರ ಬಂಧನಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರವನ್ನು ಎತ್ತಿ ಹಿಡಿದಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿರುವ ಮನವಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು, ಜಾರಿ ನಿರ್ದೇಶನಾಲಯದಲ್ಲಿನ ಪ್ರಕರಣದಲ್ಲಿ ಮಾಹಿತಿ ವರದಿಯನ್ನು (ಇಸಿಐಆರ್) ಒದಗಿಸದಿರುವುದು ಸೇರಿದಂತೆ ಎರಡು ವಿಷಯಗಳ ಮರುಪರಿಶೀಲನೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದು, ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಪಿಎಂಎಲ್‍ಎ ಕಾಯ್ದೆ ಅಡಿಯಲ್ಲಿನ ಬಂಧನ, ತನಿಖೆ ಮತ್ತು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಇಡಿಯ ಅಧಿಕಾರವನ್ನು ಸುಪ್ರೀಂಕೋರ್ಟ್ ಕಳೆದ ಜುಲೈ 27ರಂದು ನೀಡಿದ್ದ ತೀರ್ಪಿನಲ್ಲಿ ಎತ್ತಿಹಿಡಿದಿತ್ತು. ಅದನ್ನು ಮರುಪರಿಶೀಲಿಸುವಂತೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.
ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ಅಂಗೀಕರಿಸಿದ್ದನ್ನು ಸ್ಮರಿಸಬಹುದು.
ಪ್ರಶ್ನಾರ್ಹ ಆಸ್ತಿಯನ್ನು ಸ್ವಾೀಧಿನಪಡಿಸಿಕೊಳ್ಳಲು ಔಪಚಾರಿಕ ಜಪ್ತಿ ಆದೇಶವನ್ನು ಹೊರಡಿಸುವ ಮೊದಲು ಜಾರಿ ನಿರ್ದೆಶನಾಲಯ ಸೆಕ್ಷನ್ 8 (4) ರ ಅಡಿಯಲ್ಲಿ ಮಾಹಿತಿ ನೀಡಬೇಕು ಎಂಬುದು ನಿಯಮವಲ್ಲ ಎಂದು ನ್ಯಾಯಾಲಯ ಹೇಳಿತ್ತು. ಜಾರಿ ನಿರ್ದೇಶನಾಲಯ ಆಸ್ತಿಯನ್ನು ಜಪ್ತಿ ಮಾಡಲು ಅಧಿಕಾರ ಹೊಂದಿದೆ ಎಂದು ಹೇಳಿತ್ತು.