ಬೆಂಗಳೂರು,ಜ.12- ರಾಜ್ಯದಲ್ಲಿನ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಯಥಾರೀತಿ ಮುಂದುವರೆಸುವುದು ಹಾಗೂ ಕೋವಿಡ್ ಸೋಂಕು ಕಂಡುಬಂದಂತಹ ಶಾಲೆಗಳನ್ನು ಮಾತ್ರ ಮುಚ್ಚಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ನಿರ್ದೇಶನ ನೀಡಿದರು.
ಭೌತಿಕ ತರಗತಿ ಮುಂದುವರಿಸಲು ಪೋಷಕರ ಒತ್ತಾಯ ಇರುವುದಾಗಿ ಜಿಲ್ಲಾಧಿಕಾರಿಗಳು ಸಚಿವರ ಗಮನಕ್ಕೆ ತಂದಾಗ, ಹೋಬಳಿ ಅಥವಾ ಕ್ಲಸ್ಟರ್ ಮಟ್ಟದಲ್ಲಿ ಅಗತ್ಯವಿದ್ದರೆ ಮಾತ್ರ ಶಾಲೆ ಬಂದ್ ಮಾಡಿ, ಇಡೀ ಜಿಲ್ಲೆ ಬಂದ್ ಮಾಡುವುದು ಬೇಡ ಎಂದರು.
ಯಾವುದೇ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಕೋವಿಡ್ ಸೋಂಕು ಕಂಡು ಬಂದರೆ ಎಲ್ಲಾ ವಿದ್ಯಾರ್ಥಿಗಳಿಗೂ ಕೋವಿಡ್ ಪರೀಕ್ಷೆ ಮಾಡಿಸಬೇಕು. ಆ ಶಾಲೆಗಳಲ್ಲಿ ಸ್ಯಾನಿಟೈಸರ್ ಮಾಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕೋವಿಡ್ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಸಚಿವರು ಹೇಳಿದರು.
ಒಂದು ವೇಳೆ ಶಾಲೆಗಳು ಬಂದ್ ಆದರೆ ಆನ್‍ಲೈನ್ ಮೂಲಕ ಪಾಠಗಳನ್ನು ಮುಂದುವರಿಸಬೇಕು, ಜಿಲ್ಲಾಧಿಕಾರಿಗಳು ಎಲ್ಲಿ ಅಗತ್ಯವಿದೆಯೋ ಅಂತಹ ಕಡೆ ಶಾಲೆ ಬಂದ್ ಮಾಡಲು ತೀರ್ಮಾನ ಕೈಗೊಳ್ಳಬಹುದು ಎಂದು ತಿಳಿಸಿದರು.
ಈಗ ವಿದ್ಯಾರ್ಥಿಗಳಲ್ಲಿ ಕಂಡು ಬಂದಿರುವುದು ಎ ಸಿಂಥಮೆಟಿಕ್ (ಮಾದರಿಯದ್ದು) ಇದರಿಂದ ಅಂತಹ ಗಂಭೀರ ಪರಿಣಾಮವಿಲ್ಲ. ಸೋಂಕಿತ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ 15-18 ವರ್ಷದ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
