ರಾಜ್ಯದ ಮತ್ತಷ್ಟು ಪ್ರಗತಿಗೆ ಸಿಎಂ ಬೊಮ್ಮಾಯಿ ಸಂಕಲ್ಪ

Social Share

ಬೆಂಗಳೂರು,ಜ.28- ರಾಜ್ಯದ ಆರ್ಥಿಕ ಹಿತದೃಷ್ಟಿಯಿಂದ ಉತ್ತಮ ಬಜೆಟ್ ನೀಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ತಮ್ಮ ನಿವಾಸದದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನೊಂದು ವರ್ಷದಲ್ಲಿ ಚುನಾವಣೆ ಕೂಡ ಬರುತ್ತಿದೆ. ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿರಿಸಿಕೊಂಡು ರಾಜ್ಯದ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ಉತ್ತಮವಾದ ಬಜೆಟ್ ನೀಡಬೇಕಿದೆ ಎಂದರು.
ನನ್ನ ನೇತೃತ್ವದ ಸರ್ಕಾರಕ್ಕೆ ಈಗ ಆರು ತಿಂಗಳಾಗಿದೆ. ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿಯತ್ತ ಮುನವ್ನಡೆಸಬೇಕಿದೆ.ಹಿರಿಯರು, ಹೈಕಮಾಂಡ್ ಮಾರ್ಗದರ್ಶನದಲ್ಲಿ, ಕಿರಿಯರ ಸಹಕಾರದಲ್ಲಿ ಕೆಲಸ ಮಾಡಲು ನನಗೆ ಅಪಾರ ಪ್ರೋತ್ಸಾಹ ಸಿಗುತ್ತಿದೆ ಇದರಿಂದ ಉತ್ಸುಕನಾಗಿದ್ದೇನೆ ಎಂದರು.
ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲವಾದರೂ ಎಲ್ಲರ ಹಾರೈಕೆ, ಇನ್ನಷ್ಟು ಸ್ಪೂರ್ತಿಯಿಂದ ಮತ್ತು ಗಟ್ಟಿಯಾಗಿ ಕರ್ನಾಟಕವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಂಕಲ್ಪ ಮಾಡಿರುವುದಾಗಿ ತಿಳಿಸಿದರು. ಸಾಮಾನ್ಯ ಜನರಿಂದ ಹಿಡಿದು ಪಕ್ಷದ ಹಿರಿಯರು ಪದಾಧಿಕಾರಿಗಳು, ರಾಷ್ಟ್ರಪತಿಗಳು, ಪ್ರಧಾನಿ ನರೇಂದ್ರ ಮೋದಿಯವರು ಶುಭ ಕೋರಿ ಟ್ವೀಟ್ ಮಾಡಿದ್ದಾರೆ. ಅಮಿತ್ ಷಾ ಅವರು ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಕ್ಷೇತ್ರದ ಜನ ಶುಭಾಶಯಗಳನ್ನು ಕೋರಿದ್ದಾರೆ. ಅವರೆಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದೇನೆ ಎಂದರು.
ಎಲ್ಲರ ಶುಭಾಶಯಗಳು ರಾಜ್ಯವನ್ನು ಸುಭಿಕ್ಷತೆಯತ್ತ ತೆಗೆದುಕೊಂಡು ಹೋಗಲು, ರಾಜ್ಯದ ಸಮಗ್ರ ಅಭಿವೃದ್ಧಿ ಮಾಡಲು ವಿಶೇಷವಾಗಿ ರಾಜ್ಯ ದಲ್ಲಿ ಬಡವರು, ರೈತರು ಮತ್ತು ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪಂಗಡ , ಮಹಿಳೆಯರು ಮತ್ತು ಯುವಕರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಲು ದೊಡ್ಡ ಶಕ್ತಿ ಮತ್ತು ಪ್ರೇರಣೆ ನೀಡಿದೆ ಎಂದರು.
ರಾಜ್ಯದ ಅಭಿವೃದ್ಧಿ ಕುರಿತು ಹೊತ್ತಿಗೆ:
ಸರ್ಕಾರ ಇಂದು 6 ತಿಂಗಳು ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯದ ಅಭಿವೃದ್ಧಿಯ ಚಿತ್ರಣ ನೀಡುವ ಕಿರು ಹೊತ್ತಿಗೆಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದರು. ಕಳೆದ 6 ತಿಂಗಳಲ್ಲಿ ಕೋವಿಡ್ ಮತ್ತು ಪ್ರವಾಹ ನಿರ್ವಹಣೆ, ರೈತರಿಗೆ, ಮಹಿಳೆಯರಿಗಾಗಿ ತೆಗೆದುಕೊಂಡಿರುವ ಕಾರ್ಯಕ್ರಮಗಳು ಹಾಗೂ ಅದರ ಪರಿಣಾಮಗಳ ಬಗ್ಗೆ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಬಜೆಟ್ ಮಂಡನೆಯಾಗಲಿದೆ. ಚುನಾವಣೆ ವರ್ಷದ ಬಜೆಟ್ ಕೂಡಾ ಆಗಿದೆ. ರಾಜ್ಯದ ಆರ್ಥಿಕ ಸ್ಥಿತಿಯನ್ನು ಸಧೃಢ ಮಾಡುವುದು ಒಂದು ಕಡೆಯಾದರೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಎಲ್ಲ ವರ್ಗದ ಜನರಿಗೆ ಅಭಿವೃದ್ಧಿ ಮೂಲಕ ನ್ಯಾಯ ಒದಗಿಸುವ ಯೋಜನೆಗಳನ್ನು ರೂಪಿಸುವ ಉದ್ದೇಶವಿದೆ ಎಂದರು.
ಎಲ್ಲಾ ಆಯಾಮಗಳು ನಮ್ಮ ಮುಂದಿದ್ದು, ಅವುಗಳಿಗೆ ದಿಕ್ಸೂಚಿಯನ್ನು, ವೇಗವನ್ನು ಹಾಗೂ ಗುರಿ ತಲುಪುವ ಗತಿಯನ್ನು ನೀಡಲು ಸಂಕಲ್ಪ ಮಾಡಿ ಕೆಲಸ ಮಾಡುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.

Articles You Might Like

Share This Article